ಮೈಸೂರು: ಮಾಧ್ಯಮಗಳು ನೊಂದವರ ಪರ ಧ್ವನಿಯಾಗಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ವಸಂತಕುಮಾರ್ ತಿಳಿಸಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಾನಸ ಗಂಗೋತ್ರಿ, ಮಹಾರಾಣಿ ಮಹಿಳಾ ಕಲಾ ಕಾಲೇಜು ವತಿಯಿಂದ ಪತ್ರಿಕಾ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಕುರಿತ ವಿಚಾರ ಸಂಕಿರಣ’ ಉದ್ಘಾಟಿಸಿ ಮಾತನಾಡಿದರು.
ಕಲಿಕೆಯಲ್ಲಿ ಮಿದುಳು, ಹೃದಯ ಹಾಗೂ ಕರುಳುಗಳೆಂಬ ಮೂರು ಅಂಗಗಳಿವೆ. ಪತ್ರಕರ್ತರು ನೊಂದವರ ಪರ ಬರೆಯುವ ವ್ಯಕ್ತಿಗಳು ಆಗಬೇಕು. ಆದರೇ ಇಂದು ಮಾಧ್ಯಮ ಒಂದು ಉದ್ಯಮ ಆಗಿದ್ದು, ಒಳ್ಳೆ ಸುದ್ದಿ ಬೇಗ ಹರಡುವುದಿಲ್ಲ. ಕೆಟ್ಟ ಸುದ್ದಿ ಬೇಗ ಹರಡುತ್ತದೆ. ಇದು ಬದಲಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮುಖ್ಯಸ್ಥೆ ಪ್ರೊ.ಎಂ.ಎಸ್.ಸಪ್ನಾ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬರವಣಿಗೆ ಹಾಗೂ ತಂತ್ರಜ್ಞಾನ ಅತ್ಯಗತ್ಯ. ತಂತ್ರಜ್ಞಾನ ಅಭಿವೃದ್ಧಿ ಆದಂತೆ ನಾವು ಅದಕ್ಕೆ ಹೊಂದಿಕೊಳ್ಳುತ್ತಾ ಹೋಗಬೇಕು. ಕೃತಕ ಬುದ್ಧಿಮತ್ತೆ ಕಳೆದ ಒಂದು ದಶಕದಿಂದ ಈಚೆಗೆ ಹೆಚ್ಚು ಬಳಕೆಗೆ ಬಂದಿದೆ. ಜನರನ್ನು ಹೇಗೆ ತಮ್ಮ ಕಡೆಗೆ ಸೆಳೆಯಬೇಕು, ಜನರಿಗೆ ಯಾವುದರ ಬಗ್ಗೆ ಆಸಕ್ತಿ ಹೆಚ್ಚಾಗಿದೆ, ಜನರನ್ನು ಹೇಗೆ ಆಕರ್ಷಣೆ ಮಾಡಬೇಕು ಎಂಬುದು ಕೃತಕ ಬುದ್ಧಿಮತ್ತೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಅಶೋಕ್ ಕುಮಾರ್, ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಪತ್ರಕರ್ತ ಕೆ.ದೀಪಕ್ ಇದ್ದರು.