ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿಯ ಬಸವೇಶ್ವರ ಗುಡಿಯಲ್ಲಿ ಬಸವ ಭಾರತ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಲಿಂಗಾಯತ ಧರ್ಮಜಾಗೃತಿ ಕಾರ್ಯಕ್ರಮ ನಡೆಯಿತು.
ಮೂಡಗೂರು ಉದ್ದಾನೇಶ್ವರ ಮಠಧ್ಯಕ್ಷರಾದ ಶ್ರೀಇಮ್ಮಡಿ ಉದ್ದಾನ ಸ್ವಾಮೀಜಿ ಮಾತನಾಡಿ, ಲಿಂಗಾಯತರು ಹೋಮ, ಹವನಗಳನ್ನು ಮಾಡಬಾರದು, ಪಂಚಾಂಗ, ಜ್ಯೋತಿಷ್ಯಗಳತ್ತ ಸುಳಿಯಬಾರದು. ಬಸವಾದಿ ಶರಣರು ಕೊಟ್ಟ ನಿಜಾಚರಣೆಗಳನ್ನು ಪಾಲಿಸಬೇಕು, ಗುರುವಿನಿಂದ ಲಿಂಗ ಪಡೆದು ಇಷ್ಟಲಿಂಗವನ್ನು ಸದಾ ಪೂಜಿಸಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಲಿಂಗಾಯತ ಧರ್ಮದ ಆಚರಣೆಗಳನ್ನು ಕಲಿಸಬೇಕು. ಮಠಗಳು ಮೂಢನಂಬಿಕೆ ಬಿತ್ತುವ ಕೇಂದ್ರಗಳಾಗಬಾರದು, ಬಸವಾದಿ ಶರಣರ ವಚನಗಳನ್ನು ಜನರಿಗೆ ತಲುಪಿಸುವ ಸುಜ್ಞಾನ ಕೇಂದ್ರಗಳಾಗಬೇಕು. ಲಿಂಗಾಯತ ಮಠಗಳು ಬಸವಾದಿ ಶರಣರ ನೀಡಿದ ಕಾಯಕ, ದಾಸೋಹ ಶಿಕ್ಷಣವನ್ನು ಮೇಲು, ಕೀಳು ಎನ್ನದೆ ಸಮಾನತೆಯಿಂದ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು.
ಸಂಶೋಧನಾ ವಿದ್ಯಾರ್ಥಿ ಬೀದರ್‌ನ ಸಚಿನ್ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಮೊದಲ ಗುರುವಾಗಿ ಒಳ್ಳೆಯ ನಡೆ, ನುಡಿಯನ್ನು ಕಲಿಸಬೇಕು. ಯುವಕರು ಮದ್ಯಪಾನ, ಧೂಮಪಾನ, ತಂಬಾಕು ಸೇವನೆ ಮಾಡಬಾರದು. ಕಲ್ಲಿಗೆ ಹಾಲು ಎರೆದು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಶಿಕ್ಷಕ ನಂಜನಗೂಡು ನಂದೀಶ್ ಮಾತನಾಡಿದರು. ನಂಜೆದೇವನಪುರದ ಮಾದಪ್ಪ ವಚನ ಪ್ರಾರ್ಥನೆ ಮಾಡಿದರು. ಬಸವ ಭಾರತ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಶಿವರುದ್ರಪ್ಪ ಹಾಗೂ ಮಡಹಳ್ಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.