ಹುಣಸೂರು: ತಾಲೂಕಿನ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಕಳಪೆ ಆಹಾರ ವಿತರಣೆ ಸೇರಿದಂತೆ ಇತರ ಲೋಪದೋಷಗಳ ಕುರಿತು ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದ ಸಮಿತಿ ಸಮಗ್ರ ತನಿಖೆ ನಡೆಸಿ ವರದಿ ನೀಡಲಿ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಸೂಚಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಶಾಸಕ ಜಿ.ಡಿ.ಹರೀಶ್‌ಗೌಡರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಅಡಳಿತಾತ್ಮಕ ಲೋಪದೋಷಗಳ ಕುರಿತು ದಲಿತ ಮುಖಂಡ ಚಿಕ್ಕಸ್ವಾಮಿ ಮಾತನಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಉತ್ತರ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ತಹಸೀಲ್ದಾರ್ ಮತ್ತು ಇಒ ನೇತೃತ್ವದಲ್ಲಿ ಅಧಿಕಾರಿಗಳನ್ನೊಳಗೊಂಡ ಸಮಿತಿ ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಸಮಿತಿಯಲ್ಲಿ ಪ.ಜಾತಿ/ಪಂಗಡಗಳ ಮುಖಂಡರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು. ಸಮಿತಿ ತನಿಖೆ ನಡೆಸಿ ಸಲ್ಲಿಸುವ ವರದಿಯನ್ನು ಮೇಲಧಿಕಾರಿ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವ ಕಾರ್ಯ ನಡೆಸೋಣ ಎಂದರು.
ಮುಖಂಡ ಚಿಕ್ಕಸ್ವಾಮಿ ಮಾತನಾಡಿ, ತಾಲೂಕಿನಲ್ಲಿರುವ ವಿವಿಧ ಸಮುದಾಯಗಳ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯಗಳನ್ನು ಅಧಿಕಾರಿಗಳು ನೀಡುತ್ತಿಲ್ಲ. ಗಿರಿಜನ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಇಂದಿಗೂ ಬಯೋಮೆಟ್ರಿಕ್ ಪದ್ಧತಿ ಜಾರಿಯಾಗಿಲ್ಲ. ಮುರಾರ್ಜಿ ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೀಡಬೇಕಾದ ಸೋಪು, ಪೇಸ್ಟ್ ಸಹ ನೀಡುತ್ತಿಲ್ಲ. ವಸತಿ ಶಾಲೆಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟದ ಪ್ರಮಾಣಪತ್ರ ಅಧಿಕಾರಿಗಳು ನೀಡುತ್ತಿಲ್ಲ. ಕಳಪೆ ಗುಣಮಟ್ಟದ ತರಕಾರಿಗಳ ಬಳಕೆ ಆಗುತ್ತಿದೆ. ರತ್ನಪುರಿ ಮತ್ತು ಬಿಳಿಕೆರೆ ಹಾಸ್ಟೆಲ್‌ಗಳಲ್ಲಿ ರಾತ್ರಿ ಕಾವಲುಗಾರ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬದಲಾಗಿ ಕಾವಲುಗಾರರಿಗೆ ವೇತನ ನೀಡುವ ನೆಪದಲ್ಲಿ ಹಣ ಗುಳುಂ ಮಾಡಲಾಗುತ್ತಿದೆ. ಬಯೋಮೆಟ್ರಿಕ್ ಇಲ್ಲದೆ ಗಿರಿಜನ ಕಲ್ಯಾಣ ಇಲಾಖೆಯ ವಸತಿಶಾಲೆಗಳು ನಡೆಯುತ್ತಿದ್ದು, ಮಕ್ಕಳ ಸಂಖ್ಯೆ ಮತ್ತು ಆಹಾರ ಸರಬರಾಜು ಪ್ರಮಾಣಕ್ಕೆ ಹೋಲಿಕೆಯೇ ಅಗುತ್ತಿಲ್ಲ. ಇವೆಲ್ಲದರ ನಡುವೆ ವಾರದ ಹಿಂದೆ ಬಿಳಿಕೆರೆ ವಸತಿಶಾಲೆಯಲ್ಲಿ ಎರಡು ದಿನ ವಿದ್ಯುತ್‌ಸಂಪರ್ಕ ಕಡಿತಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡಸಬೇಕೆಂದು ಆಗ್ರಹಿಸಿದರು.
ಹೆಚ್ಚು ಶುಲ್ಕ ವಸೂಲಾತಿ ನಿಲ್ಲಲಿ: ಮುಖಂಡ ಪುಟ್ಟರಾಜು ಮಾತನಾಡಿ, ನಗರ ವ್ಯಾಪ್ತಿಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್‌ಸಿ ಪದ್ಧತಿ ಶಿಕ್ಷಣದ ಹೆಸರಿನಲ್ಲಿ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಂದಲೂ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲು ಮಾಡುತ್ತಿದ್ದಾರೆ. ಸಿಬಿಎಸ್‌ಸಿ ಪದ್ಧತಿ ಒಂದನೇ ತರಗತಿಯಿಂದ ಪ್ರಾರಂಭವಾಗುತ್ತದೆ. ಆದರೆ ಶಿಕ್ಷಣ ಸಂಸ್ಥೆಗಳು ಎಲ್‌ಕೆಜಿ, ಯುಕೆಜಿಯಿಂದಲೇ ಹೆಚ್ಚು ಶುಲ್ಕ ವಸೂಲು ಮಾಡುತ್ತಿವೆ. ಈ ಕುರಿತು ವರ್ಷದ ಹಿಂದೆಯೇ ಕ್ಷೇತ್ರ ಶಿಕ್ದಣಾಧಿಕಾರಿಗಳಿಗೆ ಮನವಿ ಸಲ್ಲಿಸ ಸರಿಪಡಿಸಲು ಕೋರಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ಕುರಿತು ಸ್ಪಷ್ಟನೆ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಶಾಸಕ ಹರೀಶ್‌ಗೌಡ, ಈ ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತಮಂಡಳಿ ಸಭೆ ಆಯೋಜಿಸಿ ಸಂಪೂರ್ಣ ಮಾಹಿತಿ ಪಡೆಯಬೇಕು. ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಶುಲ್ಕ ವಸೂಲಾಗಬಾರದು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಈ ನಿಯಮ ಕಡ್ಡಾಯವಾಗಿ ಜಾರಿಗೊಳ್ಳುವಂತೆ ಕ್ರಮವಹಿಸಬೇಕು. ಮುಂದಿನ ಸಭೆಯಲ್ಲಿ ಈ ಕುರಿತು ಮಾಹಿತಿಯನ್ನು ನೀಡಬೇಕೆಂದು ಸೂಚಿಸಿದರು.
ಜ.8ರಂದು ಕಾರ್ಯಾಚರಣೆ: ಬಿಳಿಕೆರೆಯ ಗ್ರಾಪಂನ 32 ವಾಣಿಜ್ಯ ಮಳಿಗೆಗಳಲ್ಲಿ ಒಂದೇ ಒಂದು ಮಳಿಗೆ ಪರಿಶಿಷ್ಟ ಜಾತಿ ಜನಾಂಗದವರಿಗೆ ನೀಡಿಲ್ಲ. ಈ ಕುರಿತು ದಶಕಗಳಿಂದ ಹೋರಾಟ ನಡೆದಿದೆ. ಮಳಿಗೆದಾರರನ್ನು ತೆರವುಗೊಳಿಸಿ ಹೊಸದಾಗಿ ಮೀಸಲಾತಿಯನ್ನಾಧರಿಸಿ ಬಾಡಿಗೆ ನೀಡಬೇಕೆಂದು ಮುಖಂಡರು ಆಗ್ರಹಿಸಿದಾಗ, ತಾ.ಪಂ.ಇಒ ಕೆ.ಹೊಂಗಯ್ಯ ಮಾತನಾಡಿ, ಹಾಲಿ ಇರುವ ಬಾಡಿಗೆದಾರರನ್ನು ತೆರವುಗೊಳಿಸಲು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೆ ಬಾಡಿಗೆದಾರರು ತೆರವುಗೊಳಿಸುವುದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರೂ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ಕಾನೂನುತಜ್ಞರೊಂದಿಗೆ ಸಮಾಲೋಚನೆ ಮಾಡಲಾಗಿದ್ದು, ಜ.8ರಂದು ಪೊಲೀಸ್ ಭದ್ರತೆಯಲ್ಲಿ ಬಾಡಿಗೆದಾರರನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗುವುದೆಂದು ತಿಳಿಸಿದರು.
ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಿ: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಈ ನಡುವೆ ನಗರವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ವ್ಯಾಪಕವಾಗಿ ನಡೆದಿದ್ದು, ಯುವಸಮೂಹ ಬದುಕು ಕಳೆದುಕೊಳ್ಳುತ್ತಿದೆ. ಅಬಕಾರಿ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸುತ್ತಿಲ್ಲವೆಂದು ಮುಖಂಡರಾದ ನಿಂಗರಾಜ ಮಲ್ಲಾಡಿ, ದೇವರಾಜ್, ಕಿರಂಗೂರು ಸ್ವಾಮಿ ಮುಂತಾದವರು ದೂರಿದರು. ಈ ವೇಳೆ ಶಾಸಕ ಮಾತನಾಡಿ, ಅಬಕಾರಿ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆಗೆ ಇಳಿಯದ ಹೊರತು ಸಮಸ್ಯೆ ಪರಿಹಾರ ಸಾಧ್ಯವಿಲ್ಲ. ಅದರಲ್ಲೂ ಗಾಂಜಾ ಮಾರಾಟ ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಕ್ರೈಂ ಹೆಚ್ಚಾಗುವ ಸಾಧ್ಯತೆ ಇದೆ. ಎರಡೂ ಇಲಾಖೆಯವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ, ನಗರಸಭೆ ಪೌರಾಯುಕ್ತೆ ಕೆ.ಮಾನಸ, ಗ್ರಾಮಾಂತರ ಠಾಣೆ ಸಿಐ ಮುನಿಯಪ್ಪ, ಬಿಇಒ ಎಸ್.ಪಿ.ಮಹದೇವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಅಂಬೇಡ್ಕರ್ ಪುತ್ಥಳಿಗೆ ನಿವೇಶನ ನಿರ್ಧರಿಸಿ: ನಗರದ ಪ್ರಮುಖ ಜಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಸಭೆ ಒಕ್ಕೊರಲ ಸಹಮತ ವ್ಯಕ್ತಪಡಿಸಿತು. ಈ ಕುರಿತು ಶಾಸಕ ಹರೀಶ್‌ಗೌಡ ಮಾತನಾಡಿ, ಜಾಗ ಗುರುತಿಸುವಲ್ಲಿ ಕೆಲವು ಕಾನೂನಾತ್ಮಕ ತೊಂದರೆಗಳಿವೆ. ನಗರದ ಸಂವಿದಾನ ವೃತ್ತದ ಬಳಿಯ ಸಿಡಿಪಿಒ ಕಚೇರಿ( ಈ ಹಿಂದೆ ತಹಸೀಲ್ದಾರ್‌ರ ವಸತಿ ಗೃಹವಾಗಿತ್ತು) ಮುಂಭಾಗದ ವಿಶಾಲ ಆವರಣ ಸೂಕ್ತ ಸ್ಥಳವೆಂದು ದಲಿತ ಸಂಘಟನೆಗಳು ಗುರುತಿಸಿವೆ. ಆದರೆ ಇಲಾಖೆಯ ಜಾಗವೆಂದು ಘೋಷಣೆಯಾಗಿರುವುದರಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ತಿಳಿಸುತ್ತಿದೆ. ಪುತ್ಥಳಿ ಸ್ಥಾಪನೆಗೆ ಇದೇ ಅತ್ಯುತ್ತಮ ಸ್ಥಳವೆನ್ನುವುದು ಮುಖಂಡರ ಮತ್ತು ನನ್ನ ಅಭಿಪ್ರಾಯವಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲೇ ಅಭಿಪ್ರಾಯವನ್ನು ಪಡೆಯೋಣ. ಈ ಕುರಿತು ಶೀಘ್ರ ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.