ಮಹಾಲಿಂಗಪುರದ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಸಣಮನಿ ಉದ್ಘಾಟಿಸಿದರು. ದಿವಾಣಿ ನ್ಯಾಯಾಧೀಶೆ ಸುಷ್ಮಾ ಟಿ.ಸಿ., ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ. ಸಲಬನ್ನವರ ಇದ್ದರು. 
ಜಿಲ್ಲೆ

ಕಾಯ್ದೆ ಕಾನೂನು ಜನ ಜೀವನದ ಕೈಪಿಡಿಯಾಗಲಿ

ಮಹಾಲಿಂಗಪುರ: ಸರ್ಕಾರದ ಕಾಯ್ದೆ ಕಾನೂನು ಜನರ ನಿತ್ಯ ಜೀವನದ ಕೈಪಿಡಿಯಾಗಲಿ ಎಂದು ರಬಕವಿ-ಬನಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ದಿವಾಣಿ ನ್ಯಾಯಾಧೀಶ ಆಶಪ್ಪ ಸಣಮನಿ ಹೇಳಿದರು.

ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್‌ನಲ್ಲಿ ಬನಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೃಷ್ಟಿಯಲ್ಲಿ ಯಾವ ಪ್ರಾಣಿಗಳಿಗೂ ಕಾನೂನುಗಳಿಲ್ಲ. ಮನುಷ್ಯರಿಗೆ ಮಾತ್ರ ಕಾನೂನುಗಳಿವೆ ಎಂದರೆ ನಾವೆಷ್ಟು ಹದ್ದು ಮೀರಿ ನಡೆಯುತ್ತೇವೆ ಎಂಬುದು ಸ್ಪಷ್ಟವಾಗುತ್ತದೆ. ಕಾನೂನು ಪಾಲಕರಾಗಿ ನಾವು ಶ್ರೇಷ್ಠರೆನಿಸಿಕೊಳ್ಳಬೇಕು. ನಾವು ಕಾನೂನು ಪಾಲಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದರು.

ಬನಹಟ್ಟಿ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ದಿವಾಣಿ ನ್ಯಾಯಾಧೀಶೆ ಸುಷ್ಮಾ ಟಿ.ಸಿ. ಮಾತನಾಡಿ, ಕಾನೂನುಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ವ್ಯಕ್ತಿಗೆ ತಾಯಿಯ ಗರ್ಭದಿಂದ ಹಿಡಿದು ಭೂತಾಯಿ ಗರ್ಭ ಸೇರುವವರೆಗೂ ಅನ್ವಯವಾಗುತ್ತವೆ. ಮಾನವ ಭ್ರೂಣಾವಸ್ಥೆಯಲ್ಲಿದ್ದಾಗಲೇ ಬದುಕುವ ಹಕ್ಕು ಪಡೆಯುತ್ತಾನೆ. ಗರ್ಭದಿಂದ ಗೋರಿಗೆ ಹೋಗುವವರೆಗೂ ಕಾನೂನು ಅನ್ವಯವಾಗುತ್ತದೆ. ಸತ್ತ ನಂತರವೂ ಮರಣ ದಿನಾಂಕ ನೋಂದಾಯಿಸಬೇಕಾಗುತ್ತದೆ ಎಂದು ತಿಳಿಸಿದರು.

ನ್ಯಾಯವಾದಿ ಸುರೇಶ ಮಡಿವಾಳರ ಉಪನ್ಯಾಸ ನೀಡಿದರು.

ಡಿಪ್ಲೊಮಾ ಕಾಲೇಜಿನ ಸಿವಿಲ್ ವಿಭಾಗದ ಎಚ್‌ಒಡಿ ಸುಭಾಸ ಮೂಶಿ ಅಧ್ಯಕ್ಷತೆ ವಹಿಸಿದ್ದರು.

ಐಟಿಐ ಉಪನ್ಯಾಸಕಿ ನೀಲಮ್ಮ ಪಟ್ಟಣಶೆಟ್ಟಿ ಪ್ರಾರ್ಥಿಸಿದರು. ಪ್ರಾಚಾರ್ಯ ಎಸ್.ಐ. ಕುಂದಗೋಳ ಸ್ವಾಗತಿಸಿದರು. ಸಂಜಯ ಶಿರೋಳ ನಿರೂಪಿಸಿದರು. ನ್ಯಾಯವಾದಿ ಮಹಾಂತೇಶ ಪಾಟೀಲ ವಂದಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ. ಸಲಬನ್ನವರ, ನ್ಯಾಯವಾದಿಗಳಾದ ಎಲ್.ಎಂ. ಬನಾಜ, ಎಂ.ಪಿ. ಕೌಜಲಗಿ, ಸಂತೋಷ ಯಡಹಳ್ಳಿ, ಸಿದ್ದು ಪೂಜಾರಿ, ರೂಪೇಶ ಲಾತೂರ ಇತರರಿದ್ದರು.