ಬೆಳಗಾವಿ: ಬೆಳಗಾವಿ&ಕಿತ್ತೂರು&ಧಾರವಾಡ ನೂತನ ರೈಲು ಮಾರ್ಗಕ್ಕೆ ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಭೂಸ್ವಾಧಿನ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಸೂಚಿಸಿದರು.
ನಗರದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನೂತನ ರೈಲ್ವೆ ಮಾರ್ಗಕ್ಕೆ ಅಂದಾಜು 1200 ಎಕರೆ ಜಮೀನು ಅಗತ್ಯವಿದೆ. ಇಲ್ಲಿಯವರೆಗೆ ಕಿತ್ತೂರು&ದೇಸೂರು ನಡುವೆ ಭೂಸ್ವಾಧಿನ ಪ್ರಕ್ರಿಯೆ ಆಗಿದೆ. ಇನ್ನೂ ಅಂದಾಜು 407.24 ಎಕರೆ ಭೂಸ್ವಾಧೀನಪ್ರಕ್ರಿಯೆ ಕುರಿತು ಅಂತಿಮ ಅಧಿಸೂಚನೆ ಹೊರಡಿಸಿ ಎಂದು ತಿಳಿಸಿದರು.
ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ: ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೈಗೊಂಡಿರುವ ವರ್ತುಲ ರಸ್ತೆ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಶ್ರೀ ಇತ್ಯರ್ಥ ಪಡಿಸಬೇಕು. ಅಲ್ಲದೆ, ಬೆಳಗಾವಿ (ಶೇಗಣಮಟ್ಟಿ)&ಹುನಗುಂದ& ರಾಯಚೂರ ನೂತನ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧಿನ ಪ್ರಕ್ರಿಯೆಗೆ ವೇಗ ಹೆಚ್ಚಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಶೇ.90ರಷ್ಟು ಪೂರ್ಣ:ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಬೆಳಗಾವಿ&ಧಾರವಾಡ ನೂತನ ರೈಲ್ವೆ ಮಾರ್ಗಕ್ಕೆ ಅವಶ್ಯಕವಿರುವ ಶೇ.90ರಷ್ಟು ಭೂಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಭೂ ಸ್ವಾಧಿನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ನಿಗದಿತ ಸಮಯದಲ್ಲಿ ಎಲ್ಲ ಪ್ರಕ್ರಿಯೆಗಳು ಫೂರ್ಣಗೊಂಡು ಕಾಮಗಾರಿಗೆ ಮುಕ್ತ ಅವಕಾಶ ಸಿಗಲಿದೆ ಎಂದು ಹೇಳಿದರು.
ಸಹಾಯಕ ಆಯುಕ್ತ ಶ್ರವಣ ನಾಯ್ಕ, ವಿಶೇಷ ಭೂಸ್ವಾಧಿನ ಅಧಿಕಾರಿ ರಾಜೇಶ್ವರಿ ಜೈನಾಪೂರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭೂವನೇಶ ಕುಮಾರ ಇತರರಿದ್ದರು.