ಗೋಣಿಕೊಪ್ಪ: ಕ್ರೀಡೆಯ ತವರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿದೆ. ಈ ಕ್ರೀಡಾಕೂಟಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರ್ಕಾರ ಮುಂದಾಗಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ವಿರಾಜಪೇಟೆಯ ದುದ್ದಿಯಂಡ ಎಚ್.ಸೂಫಿ ಹಾಜಿ ಒತ್ತಾಯಿಸಿದರು.
ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಸ್ಥಳೀಯ ಮೊಹಿದ್ದೀನ್ ಜುಮ್ಮಾ ಮಸೀದಿಯ ಆಟದ ಮೈದಾನದಲ್ಲಿ ಶನಿವಾ ಮತ್ತು ಭಾನುವಾರ ಎರಡು ದಿನಗಳಿಂದ ನಡೆದ ಮೊದಲನೇ ವರ್ಷದ ರಾಜ್ಯ ಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುವುದಲ್ಲದೆ ಜಿಲ್ಲೆಯಿಂದ ಹೆಚ್ಚಿನ ಪ್ರತಿಭಾನ್ವಿತ ಕ್ರೀಡಾಪಟುಗಳು ಹೊರಹೊಮ್ಮಲಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಅವಧಿಯಲ್ಲೂ ಬೇರೆ ಬೇರೆ ರೀತಿಯ ಕ್ರೀಡಾಕೂಟಗಳು ನಿರಂತರವಾಗಿ ಜರುಗುತ್ತಿರುತ್ತವೆ. ಇದರಿಂದಾಗಿ ಕ್ರೀಡಾಕೂಟಗಳನ್ನು ಆಯೋಜಿಸುವ ತಂಡಗಳಿಗೆ ಸಹಜವಾಗಿಯೇ ಆರ್ಥಿಕ ಕೊರತೆ ಎದುರಾಗುತ್ತದೆ. ಇದನ್ನು ನೀಗಿಸಲು ಸರ್ಕಾರ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದರ ಮೂಲಕ ಕ್ರೀಡಾಕೂಟಗಳಿಗೆ ಅನುದಾನ ಒದಗಿಸಿದರೆ ಅದು ಕ್ರೀಡೆಯ ತವರಾದ ಕೊಡಗಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಪ್ರತಿ ವರ್ಷದ ಬಜೆಟ್‌ನಲ್ಲಿ ಇದಕ್ಕಾಗಿ ಹಣವನ್ನು ಮೀಸಲಿಟ್ಟು ಕೊಡಗಿನಲ್ಲಿ ನಡೆಯುವ ಕ್ರೀಡಾಕೂಟಗಳನ್ನು ಸರ್ಕಾರ ಉತ್ತೇಜಿಸಬೇಕು. ಇದಕ್ಕಾಗಿ ಕೊಡಗಿನ ಜನಪ್ರತಿನಿಧಿಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಒತ್ತಡ ಹೇರಬೇಕು. ಮುಂಬರುವ ಬಜೆಟ್‌ನಲ್ಲೇ ಈ ಪ್ರಾಧಿಕಾರವನ್ನು ಘೋಷಿಸಲು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಬೇಕು ಎಂದು ಒತ್ತಾಯಿಸಿದ ಸೂಫಿ ಹಾಜಿ, ಕೊಡಗಿನ ಕ್ರೀಡಾ ಚಟುವಟಿಗೆ ಸರಕಾರ ಸೂಕ್ತವಾಗಿ ಉತ್ತೇಜನ ನೀಡದಿದ್ದಲ್ಲಿ ಕೊಡಗನ್ನು ಕ್ರೀಡೆಯ ತವರು ಎಂದು ಕರೆಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ರಾಜ್ಯ ಮಟ್ಟದ ಫೈಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸ್ಕ್ವಾಡ್ ಚೋಕ್ ಸಿಟಿ ತಂಡ ವಿನ್ನರ್ಸ್ ಪ್ರಶಸ್ತಿ ಪಡೆದುಕೊಂಡರೆ, ಸುಂಕದಕಟ್ಟೆಯ ಉತ್ತಮ್ ಫ್ರೆಂಡ್ಸ್ ತಂಡ ರನ್ನರ್ಸ್ ಸ್ಥಾನ ಪಡೆಯಿತು. ಫೈನಲ್ ಪಂದ್ಯದಲ್ಲಿ ಸ್ಕ್ವಾಡ್ ಚೋಕ್ ಸಿಟಿ ತಂಡ ಸುಂಕದಕಟ್ಟೆಯ ಉತ್ತಮ ಫ್ರೆಂಡ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ವಿಜಯದ ಮಾಲೆಯನ್ನು ತನ್ನ ಕೊರಳಿಗೇರಿಸಿಕೊಂಡಿತು.
ವಿಜೇತ ತಂಡಗಳಿಗೆ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ನಗದು ಬಹುಮಾನ ಸೇರಿದಂತೆ ಪಾರಿತೋಷಕಗಳನ್ನು ವಿತರಿಸಲಾಯಿತು. ಒಟ್ಟು 32 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ಖಜಾನಾಧಿಕಾರಿ ಕನ್ನಡಿಯಂಡ ಎ.ಆಲಿ ಹಾಜಿ, ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ. ಎಫ್.ಆಶ್ರಫ್, ಸ್ಥಳೀಯರಾದ ಎಚ್. ಎ. ಮೊಹಮ್ಮದ್ ಹಾಜಿ, ಕೆ.ಎಂ. ಹ್ಯಾರಿಸ್, ಪಿ.ಎ. ಬಶೀರ್, ಡಿ.ಎಸ್. ಶರ್ಹಾನ್, ಸಯಿದ್, ಡಿ.ಎಂ. ಸಿರಾಜ್, ಎಚ್.ಎಂ. ನೌಫಲ್ ಮೊದಲಾದವರು ಭಾಗವಹಿಸಿದ್ದರು.
ಪಂದ್ಯಾವಳಿ ಆಯೋಜಕರಾದ ನಲ್ವತ್ತೋಕ್ಲಿನ ಚೋಕ್ ಸಿಟಿ ಫುಟ್ಬಾಲ್ ಕ್ಲಬ್ ನ ಮುಖ್ಯಸ್ಥರಾದ ಶಾಹಿದ್, ಶರ್ಮಿದ್, ಮೊಹಾದ್, ಅಜನಾಸ್, ಅಜ್ಮಲ್ ಮೊದಲಾದವರು ಪಂದ್ಯಾವಳಿಯ ಮೇಲುಸ್ತುವಾರಿ ವಹಿಸಿದ್ದರು.
ಪಂದ್ಯಾವಳಿಯ ’ಸರಣಿ ಪುರುಷೋತ್ತಮ’ ಪ್ರಶಸ್ತಿಯನ್ನು ಸ್ಕ್ವಾಡ್ ಚೋಕ್ ಸಿಟಿ ತಂಡದ ಶಾಲು, ’ಪಂದ್ಯ ಪುರುಷೋತ್ತಮ’ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಚ್ಯಾರಿ, ’ಅತ್ಯುತ್ತಮ ಸ್ಟೈಕರ್’ ಪ್ರಶಸ್ತಿಯನ್ನು ಸ್ಕ್ವಾಡ್ ಚೋಕ್ ಸಿಟಿ ತಂಡದ ವಿಜು, ’ಅತ್ಯುತ್ತಮ ಗೋಲ್ ಕೀಪರ್’ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಧನು, ’ಅತ್ಯುತ್ತಮ ಡಿಫೆಂಡರ್’ ಪ್ರಶಸ್ತಿಯನ್ನು ಸುಂಕದಕಟ್ಟೆ ಉತ್ತಮ್ ಫ್ರೆಂಡ್ಸ್ ತಂಡದ ಕಣ್ಣ ಅವರು ಪಡೆದುಕೊಂಡರು.