ಜಿಲ್ಲೆ

ಮನೆ-ಮನಗಳಲ್ಲಿ ನಿತ್ಯೋತ್ಸವವಾಗಲಿ ಕನ್ನಡ ಹಬ್ಬ

ಲಕ್ಷೆ್ಮೕಶ್ವರ: ಕನ್ನಡದ ಘಮ ಎಲ್ಲೆಡೆ ಪಸರಿಸಲು ಕನ್ನಡಿಗರೇ ಮುಂದಾಗಬೇಕು. ಯುವಪೀಳಿಗೆ ಕನ್ನಡವನ್ನು ಪ್ರೀತಿಸಿ, ಗೌರವಿಸಬೇಕು. ಅದಕ್ಕಾಗಿ ಮನೆ-ಮನಗಳಲ್ಲಿ ಕನ್ನಡದ ಹಬ್ಬ ನಿತ್ಯೋತ್ಸವವಾಗಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಹೇಳಿದರು.

ಕರ್ನಾಟಕ ನಾಮಕರಣಗೊಂಡ 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ತೇರಿನ ಜ್ಯೋತಿ ರಥಯಾತ್ರೆ ಗುರುವಾರ ಪಟ್ಟಣದ ಗದಗ ನಾಕಾ ಬಳಿ ಆಗಮಿಸಿದಾಗ ಪುರಸಭೆ, ತಾಲೂಕಾಡಳಿತ, ಕನ್ನಡ ಸಾಹಿತ್ಯ ಪರಿಷತ್, ಸಾಹಿತಿಗಳು, ಮುಖಂಡರೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿ ಅವರು ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಸ್ಕೃತಿ, ಹಲವು ಒಳಿತು, ಶ್ರೇಷ್ಠತೆಗಳ ಸಂಗಮವೇ ಆಗಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೇಡ್ಲೇರಿ, ಕನ್ನಡ ನಮ್ಮ ನಿತ್ಯ ನೂತನ ಭಾಷೆಯಾಗಬೇಕು. ಕನ್ನಡ ಭಾಷೆ-ಸಂಸ್ಕೃತಿ, ನೆಲ-ಜಲದ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿಗಳ ಆತ್ಮಾವಲೋಕನವಾಗಬೇಕು. ಕನ್ನಡ ನಮ್ಮ ಬದುಕಿನ, ಅನ್ನದ ಭಾಷೆಯಾಗಿ ನಿತ್ಯ ಜೀವನದಲ್ಲಿ ಬಳಕೆಯಾಗಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಹಿರಿಯ ಸಾಹಿತಿಗಳಾದ ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ರಮೇಶ ನವಲೆ, ಬಸವರಾಜ ಬಾಳೇಶ್ವರಮಠ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮುರಳೀಧರ ಹುಬ್ಬಳ್ಳಿ, ಮಂಜುನಾಥ ಚಾಕಲಬ್ಬಿ, ಈರಣ್ಣ ಗಾಣಿಗೇರ, ಡಾ.ಎಸ್.ಜಿ. ಹೂವಿನ, ಎಂ.ವಿ. ಹೂಗಾರ, ಎಸ್.ವಿ. ಕನೋಜ್, ಎಲ್.ಆರ್. ಮಲ್ಲಸಮುದ್ರ, ಸತೀಶ ಬೋಮಲೆ, ಉಮೇಶ ನೇಕಾರ, ದೇವಪ್ಪ ನಂದೆಣ್ಣವರ, ನಿಂಗಪ್ಪ ತಹಶೀಲ್ದಾರ, ಎನ್.ಎ. ಮುಲ್ಲಾ, ಸದಾನಂದ ನಂದೆಣ್ಣವರ, ಸುರೇಶ ಕೊರಡೂರ, ಮೋಹನ ನಂದೆಣ್ಣವರ, ಪಿಎಸ್​ಐ ಈರಪ್ಪ ರಿತ್ತಿ, ಇತರರಿದ್ದರು.

ಗದಗ ನಾಕಾದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಘೊಷಣಾ ಫಲಕಗಳನ್ನು ಹಿಡಿದು ದಾರಿಯುದ್ದಕ್ಕೂ ಘೊಷಣೆಗಳನ್ನು ಕೂಗುತ್ತಾ ಸಾಗಿದರು. ಚಂದನ ಶಾಲೆಯ ಮಕ್ಕಳ ಬ್ಯಾಂಡ್ ತಂಡದ ವಾಧ್ಯಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು, ಡೊಳ್ಳು ಕುಣಿತ, ಸೂರಣಗಿಯ ಪುರವಂತ ತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.