ಜಿಲ್ಲೆ

ಭೂ ವ್ಯವಹಾರಗಳ ತನಿಖೆ ಸಿಬಿಐಗೆ ವಹಿಸಲಿ

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ 20 ವರ್ಷಗಳ ಅವಧಿಯಲ್ಲಿ ನಡೆದಿರುವ ಭೂ ವ್ಯವಹಾರಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.

ಬಿ.ಸೋಮಶೇಖರ್ ಶಾಸಕರಾದಾಗಿನಿಂದ ಹಿಡಿದು ಇಲ್ಲಿವರೆಗೂ ನಡೆದಿರುವ ಎಲ್ಲ ಭೂ ವ್ಯವಹಾರ ಪ್ರಕರಣಗಳನ್ನು ಯಾವುದೇ ತನಿಖಾ ಸಂಸ್ಥೆಯಿಂದಲಾದರೂ ನಡೆಸಲಿ. ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಹೋಬಳಿ ಚೊಟ್ಟನಹಳ್ಳಿ ಗ್ರಾಮದ ಸರ್ವೇ ನಂ.103ರಲ್ಲಿ 23 ಗುಂಟೆ ಸರ್ಕಾರಿ ಖರಾಬು ಜಮೀನಿದೆ, ಈ ಜಮೀನನ್ನು ಕಬಳಿಸುವ ದುರುದ್ದೇಶದಿಂದ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಯಾವುದೇ ದಾಖಲೆಗಳಿಲ್ಲದಿದ್ದರೂ ಅನು ಬಿನ್ ಎಂ.ಎಸ್.ಸುಂದ್ರಪ್ಪ, ಎಸ್.ಎಂ.ಸತೀಶ್‌ಬಾಬು ಬಿನ್ ಎಂ.ಕೆ.ಶಿವಣ್ಣ, ಎಂ.ಎಸ್.ಮಂಜುನಾಥ್ ಬಿನ್ ಎಂ.ಕೆ.ಶಿವಣ್ಣ, ಎಂ.ಎಸ್.ರಾಧಾಕೃಷ್ಣ ಬಿನ್ ಎಂ.ಕೆ.ಶಿವಣ್ಣ, ಪ್ರಭು ಬಿನ್ ಲೇ.ನಂಜಯ್ಯ ಎಂಬ ಒಂದೇ ಕುಟುಂಬಕ್ಕೆ ಸೇರಿದವರ ಹೆಸರಿಗೆ ತಲಾ 4 ಎಕರೆಯಂತೆ 24 ಎಕರೆ ಜಮೀನನ್ನು ಹಕ್ಕು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಯು ಮಳವಳ್ಳಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಗುಮಾಸ್ತ ಜೆ.ಎಂ.ಪ್ರಕಾಶ್ ಎಂಬಾತನನ್ನು ಅಮಾನತುಗೊಳಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಹಕ್ಕು ಬದಲಾವಣೆಯಾಗಲು ರಾಜಸ್ವ ನಿರೀಕ್ಷಕರು, ತಹಸೀಲ್ದಾರ್ ಕೂಡ ಭಾಗಿಯಾಗಿದ್ದು, ಅವರ ವಿರುದ್ಧವೂ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಶಾಸಕರ ಭರವಸೆ ಸುಳ್ಳಾಗಿದೆ: ಶಾಸಕರಾಗಿ ಬಂದ ನಂತರ ಉತ್ತಮ ಆಡಳಿತ ನೀಡುವುದಾಗಿ ಕ್ಷೇತ್ರದ ಜನರಿಗೆ ಪಿ.ಎಂ.ನರೇಂದ್ರಸ್ವಾಮಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸರ್ಕಾರಿ ಭೂಮಿಯನ್ನೇ ಕಬಳಿಸುವ ಪ್ರಕರಣಗಳು ಹೊರಬರಲಾರಂಭಿಸಿವೆ. ತಾಲೂಕಿನಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷನಾಗಿದ್ದಾಗ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸುವಂತೆ ಅಂದಿನ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದ್ದೆ. ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದೆ. ಅದೇ ಸಮಯಕ್ಕೆ ಚುನಾವಣೆ ಎದುರಾಗಿದ್ದರಿಂದ ಅಲ್ಲಿಗೇ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ತಿಳಿಸಿದರು.

ಲೋಕಾಯುಕ್ತಕ್ಕೆ ದೂರು: ಭೂ ಅಕ್ರಮ ನಡೆಯುವುದಕ್ಕೆ ಶಾಸಕರ ಸಹಕಾರವಿದೆಯೋ? ಸರ್ಕಾರಿ ಭೂಮಿ ಖಾತೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳು ಶಾಸಕರ ಬೆಂಬಲಿಗರೋ ಅಥವಾ ಹಿತೈಷಿಗಳೋ ಗೊತ್ತಿಲ್ಲ. ಕೂಡಲೇ ಈ ಖಾತೆಯನ್ನು ರದ್ದುಪಡಿಸುವುದರೊಂದಿಗೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಈ ವಿಷಯವಾಗಿ ಲೋಕಾಯುಕ್ತ ಮತ್ತು ಸರ್ಕಾರಕ್ಕೂ ದೂರು ಸಲ್ಲಿಸುವುದಾಗಿ ತಿಳಿಸಿದರು.
ಮಳವಳ್ಳಿ ತಾಲೂಕಿನ ಹೊಸಹಳ್ಳಿ, ಹಳದಾಸನಹಳ್ಳಿ, ಕಗ್ಗಲಿಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಮತ್ತು ಮಣ್ಣು ದಂಧೆ ನಡೆಸಲಾಗುತ್ತಿದೆ. ಲಾರಿಗಳಲ್ಲಿ ಲೋಡ್‌ಗಟ್ಟಲೆ ಮರಳು, ಮಣ್ಣು ಸಾಗಣೆಯಾಗುತ್ತಿದ್ದರೂ, ಅದನ್ನು ಯಾರೂ ತಡೆಯುತ್ತಿಲ್ಲ. ನನ್ನ ಅವಧಿಯಲ್ಲಿ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಿದ್ದೆ. ನೂತನ ಶಾಸಕರು ಬಂದ ನಂತರದಲ್ಲಿ ಅಕ್ರಮಗಳು ಒಂದೊಂದಾಗಿ ತಲೆ ಎತ್ತಲಾರಂಭಿಸಿವೆ. ಇವುಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಸಾತನೂರು ಜಯರಾಂ, ಸಿದ್ದಾಚಾರಿ, ಪ್ರಶಾಂತ್, ಕಾಂತರಾಜು, ಆನಂದ್, ಪುಟ್ಟಬುದ್ಧಿ, ಆನಂದ್ ಹಾಜರಿದ್ದರು.

80 ಎಕರೆ ಸರ್ಕಾರಿ ಗೋಮಾಳ ಒತ್ತುವರಿ
ಮಳವಳ್ಳಿ ತಾಲೂಕಿನ ಧನಗೂರು ಎಲ್ಲೆಯ ಸರ್ವೇ ನಂ. 299/18 ಪಿ-1 ಮುಸ್ಲಿಂ ಜನಾಂಗದ ಒಂದೇ ಕುಟುಂಬದ 8 ಜನರಿಗೆ ತಲಾ 3.39 ಎಕರೆಯಂತೆ 1989-90ರಲ್ಲಿ 28 ಎಕರೆ ಜಮೀನು ಮಂಜೂರಾಗಿದೆ. ಆದರೆ, ಈ 28 ಎಕರೆ ಜಮೀನಿನೊಂದಿಗೆ ಸುಮಾರು 80 ಎಕರೆಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಈ ಬಗ್ಗೆಯೂ ಜಿಲ್ಲಾಡಳಿತ ಮತ್ತು ಸರ್ಕಾರ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಂಡು, ಸರ್ಕಾರದ ಜಮೀನನ್ನು ಉಳಿಸಬೇಕು.
ಡಾ. ಕೆ.ಅನ್ನದಾನಿ, ಮಾಜಿ ಶಾಸಕ, ಮಳವಳ್ಳಿ.