ಜಿಲ್ಲೆ

ಒಳಪಂಗಡಗಳು ಒಂದಾಗಿ ಹೋರಾಡಲಿ

ವೀರೇಶ ಸೌದ್ರಿ

ಹಿರೇಕೆರೂರ: ಲಿಂಗಾಯತ, ವೀರಶೈವರು ಒಂದಾಗಬೇಕು ಎಂಬುದು ಕೇವಲ ಮಾತಿನಲ್ಲಿ ಉಳಿದಿದ್ದು, ಪ್ರತಿಯೊಂದು ಲಿಂಗಾಯತ ಒಳ ಪಂಗಡಗಳ ಜನರ ಮನಸಲ್ಲಿ ಮೂಡಬೇಕು ಮತ್ತು ಅದು ಕೃತಿಯಾಗಿ ಜಾರಿಯಾಗಬೇಕು. ಆಗ ಮಾತ್ರ ಈ ಸಮುದಾಯಕ್ಕೆ ರಾಜಕೀಯ ಬಲ ಸಿಗಲು ಸಾಧ್ಯ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಗುರುಭವನದಲ್ಲಿ ಬುಧವಾರ ಏರ್ಪಡಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕು ಘಟಕದ ಸೇವಾದೀಕ್ಷಾ ಹಾಗೂ ಸದಸ್ಯತ್ವ ಅಭಿಯಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜ ಲೌಖಿಕವಾಗಿ ಬೆಳೆಯಲು ರಾಜಕೀಯ ಶಕ್ತಿಬೇಕು. ಲಿಂಗಾಯತರಲ್ಲಿರುವ ಸಹನೆ ಶಕ್ತಿ ನಮ್ಮನ್ನು ಹಾಳು ಮಾಡುತ್ತಿದೆ. ಎಲ್ಲ ಒಳಪಂಗಡಗಳು ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಕೇಂದ್ರ ಸರ್ಕಾರದ ಒಬಿಸಿ ಸ್ಥಾನಮಾನ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಜನ ಯೋಚಿಸಬೇಕು ಎಂದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳ ನಡುವೆ ಸಾಮರಸ್ಯದ ಜತೆಗೆ ನಾವೆಲ್ಲ ಒಂದು ಎಂಬ ಭಾವನೆ ಮೂಡಬೇಕು. ಹಿರೇಕೆರೂರಿನಲ್ಲಿ ಕೈಗೊಂಡಿರುವ ಸದಸ್ಯತ್ವ ಅಭಿಯಾನವು ಹೋರಾಟಕ್ಕೆ ಅಡಿಗಲ್ಲು ಹಾಕಿದಂತೆ. ಭಕ್ತ ಒಂದು ಭಾಗವಾದರೆ ಗುರು ಒಂದು ಭಾಗ. ಆದ್ದರಿಂದ ಸಮಾಜದ ಜನರ ಒಗ್ಗೂಡುವಿಕೆಯಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ. ಸದಸ್ಯತ್ವ ನೋಂದಣಿ ಮಾಡಿಸಿ ಸಮಾಜಕ್ಕೆ ಶಕ್ತಿ ತುಂಬಬೇಕು ಎಂದರು.

ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಎಲ್ಲರನ್ನೂ ಸಮಾನತೆಯಿಂದ ಕಾಣುವ ಲಿಂಗಾಯತರು ಹೊರಗೆ ಉಳಿದಿದ್ದು, ಬಸವಣ್ಣನವರ ತತ್ವವನ್ನು ಮುಂದಿಟ್ಟುಕೊಂಡು ನಮ್ಮನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಹೊರಗೆ ಇಟ್ಟಿದ್ದಾರೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಮಾಜದ ಜನರು ಅವಕಾಶ ವಂಚಿತರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ಮಾನ್ಯತೆ ವೀರಶೈವ ಲಿಂಗಾಯತ ಸಮಾಜಕ್ಕೆ ಸಿಗಬೇಕು ಎಂದರು.

ತಿಪ್ಪಾಯಿಕೊಪ್ಪ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಾಹಾಂತ ಸ್ವಾಮೀಜಿ ಮಾತನಾಡಿ, ಜನರು ತಮ್ಮ ತಮ್ಮ ಇಚ್ಛಾನುಸಾರ ಒಳಪಂಗಡಗಳನ್ನು ಮಾಡಿಕೊಂಡು ತಮ್ಮದೆ ಆಚಾರ ವಿಚಾರ ನಡೆಸುತ್ತಿದ್ದಾರೆ. ನಾವೆಲ್ಲ ಒಂದೇ ಎಂಬ ಭಾವನೆ ಹುಟ್ಟಿಸುವಲ್ಲಿ ಎಲ್ಲ ಮಠಗಳು ಮುಂದಾಗಬೇಕು ಎಂದರು.

ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ತಾಲೂಕಾಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಪಪಂ ಸದಸ್ಯರಾದ ಗುರುಶಾಂತಪ್ಪ ಯತ್ತಿನಹಳ್ಳಿ, ಮಹೇಂದ್ರ ಬಡಳ್ಳಿ, ಪ್ರಮುಖರಾದ ಎಸ್.ಎಸ್. ಪಾಟೀಲ. ಈಶ್ವರಗೌಡ ಶಿರಿಗೌಡ್ರ, ಜಿ.ಪಿ. ಪ್ರಕಾಶಗೌಡ, ಎಸ್.ಬಿ. ತಿಪ್ಪಣ್ಣನವರ, ಪಾಲಾಕ್ಷಗೌಡ ಪಾಟೀಲ, ರಾಮಣ್ಣ ಕೆಂಚಳ್ಳೇರ, ಲತಾ ಗೌಡ್ರ, ಸುಮಿತ್ರಾ ಪಾಟೀಲ, ಮಂಜುಳಾ ಬಾಳಿಕಾಯಿ, ಲತಾ ಬಣಕಾರ, ಮಾಲತೇಶ ಗಂಗೋಳ ಇತರರಿದ್ದರು. ಮಹೇಂದ್ರ ಬಣಕಾರ, ರೇಖಾ ನಲವಾಲದ ನಿರ್ವಹಿಸಿದರು.

ವೀರಶೈವ, ಲಿಂಗಾಯತ ಉಪ ಪಂಗಡಗಳು ಒಂದಾಗದಿದ್ದರೆ ಅಭಿವೃದ್ಧಿ ಅಸಾಧ್ಯ. ನಾವು ಯಾವ ಜಾತಿಯ ವಿರುದ್ಧವೂ ಮಹಾಸಭೆ ಬಲಗೊಳಿಸುತ್ತಿಲ್ಲ. ನಮ್ಮ ಸಮುದಾಯದ ಹಕ್ಕನ್ನು ನಾವು ಪ್ರತಿಪಾದಿಸಿ ಸಮಾಜವನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿದೆ. ನಾವೆಲ್ಲರೂ ಮೂಲ ಲಿಂಗಾಯತರು ಎನ್ನುವುದನ್ನು ಅರಿಯಬೇಕು. ಬಿ.ಸಿ. ಪಾಟೀಲ, ಮಾಜಿ ಸಚಿವ