ಹನಗೋಡು: ಶಾಲೆಯಲ್ಲಿ ವಿದ್ಯೆ ಕಲಿಸುವ ಶಿಕ್ಷಕರು ಗುರುಗಳಾದರೆ, ಮಧ್ಯಾಹ್ನ ಬಿಸಿಯೂಟ ನೀಡುವ ಅಡುಗೆಯವರೂ ಗುರುವಿಗೆ ಸಮಾನರು. ಹಾಗಾಗಿ ಅವರನ್ನು ಗೌರವದಿಂದ ಕಾಣುವ ಕೆಲಸ ಆಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಹದೇವ್ ಹೇಳಿದರು.
ಸೇವೆಯಿಂದ ನಿವೃತ್ತಿ ಹೊಂದಿದ ಕರ್ಣಕುಪ್ಪೆ ಕ್ಲಸ್ಟರ್ ವ್ಯಾಪ್ತಿಯ ಬಿಸಿಯೂಟ ತಯಾರು ಮಾಡುವವರಿಗೆ ಶುಕ್ರವಾರ ಕರ್ಣಕುಪ್ಪೆ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೀಳ್ಕೊಡುಗೆ ನೀಡಿ ಮಾತನಾಡಿದರು.
ಶಿಕ್ಷಕರಿಗೆ ಅಕ್ಷರ ಕಲಿಸುವ ಜವಾಬ್ದಾರಿ ಇದ್ದರೆ ಬಿಸಿಯೂಟ ತಯಾರಿಸುವವರಿಗೆ ರುಚಿಕರವಾದ ಅನ್ನ ನೀಡುವ ಜತೆಗೆ ಆರೋಗ್ಯ ಭಾಗ್ಯ ಕಲ್ಪಿಸುವ ಜವಬ್ದಾರಿ ಇರುತ್ತದೆ. ಆದ್ದರಿಂದ ಮಕ್ಕಳ ಸುರಕ್ಷತೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಎಲ್ಲರ ನೆರವು ಅತ್ಯಗತ್ಯ. ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿ ಎಂದು ಕುಳಿತರೆ ಸಾಲದು. ಬದಲಾಗಿ ಎಲ್ಲರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಬಿಆರ್‌ಸಿ ಹೇಮಲತಾ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಲೋಕೇಶ್, ಇಸಿಒ ರುದ್ರಪ್ಪ, ಕುಮಾರಸ್ವಾಮಿ, ಕೇಶವಮೂರ್ತಿ, ಸಿ ಆರ್ ಪಿ ಪ್ರಸನ್ನ ಇತರರಿದ್ದರು.