ಜಿಲ್ಲೆ

ಕೊಪ್ಪಳ ಬಂಡಾಯದ ಇತಿಹಾಸ ಮರು ರಚನೆಯಾಗಲಿ

ಮುಂಡರಗಿ: ಸ್ವಾತಂತ್ರ್ಯ ಹೋರಾಟದ ಸತ್ಯ ಸಂಗತಿಗಳನ್ನು ಜನರಿಗೆ ತಲುಪಿಸುವ ಮೂಲಕ ಈ ನಾಡಿನ ಹೋರಾಟದ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳಬೇಕಾದ ಸಮಯ ಬಂದಿದೆ.

ಈ ಮೂಲಕ 1858ರ ಕೊಪ್ಪಳ ಬಂಡಾಯದ ಇತಿಹಾಸ ಮರು ರಚನೆಯಾಗಬೇಕು ಎಂದು ತಾಲೂಕಿನ ಕಲಕೇರಿ ಸ್ವಾತಂತ್ರ್ಯ ಹೋರಾಟಗಾರ ವೀರಪ್ಪ ದೇಸಾಯಿ ವಂಶಜ ರವಿರಾಜ ದೇಸಾಯಿ ಒತ್ತಾಯಿಸಿದ್ದಾರೆ.


ಈ ಕುರಿತು ಕೆಲ ದಾಖಲೆಗಳ ಸಮೇತ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಬ್ರಿಟಿಷ್ ದಾಖಲೆಗಳನ್ನು ಆಧರಿಸಿ ರಚಿತವಾದ ಸ್ವಾತಂತ್ರ್ಯ ಹೋರಾಟಗಾರ ಮುಂಡರಗಿ ಭೀಮರಾಯನ ಇತಿಹಾಸವನ್ನು ಕಲಕೇರಿ ಸಂಸ್ಥಾನದ ಚಾರಿತ್ರಿಕ ದಾಖಲೆಗಳೊಂದಿಗೆ ಪರಾಮರ್ಶಿಸಿ ಮರು ರಚನೆಯಾಗಬೇಕಿದೆ. ಏಕೆಂದರೆ, ಪ್ರಚಲಿತ ಭೀಮರಾಯನ ಇತಿಹಾಸ ಕೆಲವು ಅಪವಾದಗಳಿಂದ ಕೂಡಿದ್ದು, ಹಲವು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುತ್ತಿದೆ ಎಂದು ದೂರಿದ್ದಾರೆ.

2014ರಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಧನ ಸಹಾಯದೊಂದಿಗೆ ಸಂಶೋಧಕ ಡಾ. ಷಡಕ್ಷರಯ್ಯ ಹಾಗೂ ಡಾ. ವನಜಾಕ್ಷಿ ಭರಮಗೌಡ್ರ ಸಂಪಾದಕತ್ವದಲ್ಲಿ ಪ್ರಕಟವಾದ ಕಲಕೇರಿ ಸಂಸ್ಥಾನದ ದಾಖಲೆಗಳ ಸಾಂಸ್ಕೃತಿಕ ಅಧ್ಯಯನ ಕೃತಿಯಲ್ಲಿ ಪ್ರಕಟವಾದ ಸಂಗೊಳ್ಳಿ ರಾಯಣ್ಣನ ಹೋರಾಟದ ಲಾವಣಿಯಲ್ಲಿ ಈ ಭೀಮರಾಯನ ತಂದೆ ರಂಗರಾಯನ ರಾಯಣ್ಣನ ಹೋರಾಟಕ್ಕೆ ಪಿತೂರಿ ಮಾಡಿದ ಉಲ್ಲೇಖವಿದೆ. ಈ ಐತಿಹಾಸಿಕ ಮಹತ್ವದ ದಾಖಲೆ ಕಲಕೇರಿ ದೇಸಾಯಿಯವರ ಬಳಿ ಇನ್ನೂ ಸುರಕ್ಷಿತವಾಗಿದೆ.


1858ರ ಕೊಪ್ಪಳ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿಗಳ ನಡುವೆ ನಡೆದ ಪತ್ರ ವ್ಯವಹಾರಗಳಲ್ಲಿ ಭೀಮರಾಯನು ಕಲಕೇರಿ ನಾಡಗೌಡನಾಗಿದ್ದನೆಂಬ ಉಲ್ಲೇಖವಿದೆ. ಎಲ್ಲಿಯೂ ಹರಪನಹಳ್ಳಿಯ ತಹಸೀಲ್ದಾರ್ ಆಗಿದ್ದರ ಬಗ್ಗೆ ಅಧಿಕೃತ ದಾಖಲೆ ದೊರೆತಿಲ್ಲ.


ಬಂಡಾಯದ ನಂತರದ ದಿನಗಳಲ್ಲಿ ಮುಂಡರಗಿ ನಾಡಗೌಡ ಮನೆತನದವರಿಗೆ ಬ್ರಿಟಿಷ್ ಸರ್ಕಾರ ಗೌರವಾನ್ವಿತ ನ್ಯಾಯಾಧೀಶರ ಹುದ್ದೆಯನ್ನು ನೀಡಿದ ದಾಖಲೆಗಳು ಲಭ್ಯವಾಗಿದ್ದು, ಹಲವು ಸಂಶಯವನ್ನು ಹುಟ್ಟುಹಾಕುತ್ತವೆ. ಇತ್ತೀಚೆಗೆ ದೊರೆತ ಕೆಲವು ದಾಖಲೆಗಳಲ್ಲಿ ಕಲಕೇರಿ ಪೇಶ್ವೆ ಪ್ರಾಂತವಾಗಿತ್ತು.

1810ರಲ್ಲಿ ಕಲಕೇರಿ ತಾಲೂಕಾಗಿತ್ತು ಹಾಗೂ ಕಲಕೇರಿ ಬ್ರಿಟಿಷರ ಆಧೀನಕ್ಕೆ ಹೋದನಂತರ 1825ರಲ್ಲಿ ಡಂಬಳ ತಾಲೂಕು ಆಡಳಿತ ಕೇಂದ್ರವಾಗಿ ಬ್ರಿಟಿಷ ಅಧಿಕಾರಿಗಳಾದ ಮಹಲಕರಿ ಮತ್ತು ಧಾರವಾಡದ ಕಲೆಕ್ಟರ್ ಕಚೇರಿಯೊಂದಿಗೆ ಆಡಳಿತಾತ್ಮಕ ಪತ್ರ ವ್ಯವಹಾರ ನಡೆದ ವಿಷಯಗಳೂ ದಾಖಲಾಗಿವೆ. ಹೀಗಾಗಿ ಈ ಎಲ್ಲ ವಿಷಯಗಳು 1858ರ ಬಂಡಾಯದಲ್ಲಿ ಕಲಕೇರಿ ಸಂಸ್ಥಾನಿಕರ ಪಾತ್ರದ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅವಕಾಶ ಮಾಡಿಕೊಡುತ್ತಿದೆ.

1819ರಲ್ಲಿ ಕೊಪ್ಪಳದಲ್ಲಿ ಬ್ರಿಟಿಷರ ವಿರುದ್ಧ ಬಂಡಾಯ ನಡೆಸಿದ್ದ ವೀರಪ್ಪ ದೇಸಾಯಿಯವರು ಕಲಕೇರಿ ಸಂಸ್ಥಾನಿಕರು. ಈ ಎಲ್ಲದರ ಹಿನ್ನೆಲೆಯಲ್ಲಿ ಇತಿಹಾಸ ಮರು ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.