ಕೆ.ಆರ್.ನಗರದ ನವನಗರ ಅರ್ಬನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಜನಪ್ರಿಯ ಕತೆಗಾರ ವಸುಜೇಂದ್ರ ಅವರನ್ನು ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಅಭಿನಂದಿಸಿದರು. ಕೆ.ಎನ್.ದಿನೇಶ್, ಸೃಷ್ಟಿ ನಾಗೇಶ್, ಕೆ.ಎಲ್.ರಮೇಶ್ ಕೆ.ಪಿ.ಪ್ರಭುಶಂಕರ್, ಜಿ.ಪ್ರಕಾಶ್, ಡಾ.ಡಿ.ನಟರಾಜು, ಕೇಶವ್, ಹೆಬ್ಬಾಳು ವೇಣುಗೋಪಾಲ್, ನಾಗೇಶ್, ರಂಗನಾಥ್, ಹೆಗ್ಗಂದೂರು ಪ್ರಭಾಕರ್ ಮತ್ತಿತರರು ಇದ್ದರು. 
ಜಿಲ್ಲೆ

ವಿದೇಶಗಳ ಇತಿಹಾಸ ಕನ್ನಡದಲ್ಲಿ ರಚನೆಯಾಗಲಿ

ಜನಪ್ರಿಯ ಕಥೆಗಾರ ಸಾಹಿತಿ ವಸುದೇಂದ್ರ ಅಭಿಮತ

ಕೆ.ಆರ್.ನಗರ : ಇತಿಹಾಸ ಓದಿದವರು ಮಾತ್ರ ಭವಿಷ್ಯವನ್ನು ಅರಿತು ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ಜನಪ್ರಿಯ ಕಥೆಗಾರರೂ ಆದ ಖ್ಯಾತ ಸಾಹಿತಿ ವಸುದೇಂದ್ರ ಹೇಳಿದರು.

ಪಟ್ಟಣದ ನವನಗರ ಅರ್ಬನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಮತ್ತು ಅವರ ಸ್ನೇಹಿತರು ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಬೇರೆ ದೇಶಗಳ ಇತಿಹಾಸ ಅಧ್ಯಯನ ಮಾಡಿ ಪುಸ್ತಕ ಮತ್ತು ಕಥೆ ಬರೆದ ಉದಾಹರಣೆಗಳಿಲ್ಲ. ಆದರೆ ಆ ಪ್ರಯತ್ನಗಳು ನಡೆದರೆ ಭವಿಷ್ಯದ ಪ್ರಜೆಗಳಿಗೆ ನಾವು ವಿಶ್ವದ ವಿಚಾರ ಮತ್ತು ವಿದ್ಯಾಮಾನಗಳನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಇತಿಹಾಸ ಓದದವನು ಎಂದಿಗೂ ಇತಿಹಾಸ ಸೃಷ್ಟಿಸಲಾರ ಎಂಬ ಮಾತು ಸರ್ವಕಾಲಿಕ ಸತ್ಯವಾಗಿದ್ದು, ಇದನ್ನು ಅರಿತು ನಾವೆಲ್ಲರೂ ಬದುಕು ನಡೆಸಿ ಭವಿಷ್ಯ ರೂಪಿಸಿಕೊಳ್ಳಬೇಕು. ನಾನು 5 ದೇಶಗಳ ಇತಿಹಾಸ ಅಧ್ಯಯನ ಮಾಡಿ ರಚಿಸಿರುವ ರೇಷ್ಮೆ ಬಟ್ಟೆ ಎಂಬ ಕಾದಂಬರಿ ಹಲವು ಕೌತುಕ ಮತ್ತು ಸತ್ಯದ ದರ್ಶನ ಮಾಡಲಿದ್ದು, ಇಂತಹ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.

ಮನುಷ್ಯ ಪರಸ್ಪರ ಬೆಸೆದುಕೊಂಡು ಧರ್ಮ ಪ್ರಸಾರವಾಗಿ ಸಂಸ್ಕೃತಿ ಪಸರಿಸಬೇಕಾದರೆ ಸಂಪರ್ಕ ದಾರಿ ಬಹಳ ಪ್ರಮುಖವಾಗಿದ್ದು. ಇದಕ್ಕಾಗಿ ರಾಜ್ಯ ಮತ್ತು ದೇಶಗಳ ನಡುವೆ ಸಂಪರ್ಕ ಮತ್ತು ಸಂಬಂಧ ಅತ್ಯಂತ ಪ್ರಮುಖವಾಗಿರುವುದರಿಂದ ಈ ಕೆಲಸ ಸುಗಮವಾಗಿ ನಡೆದರೆ ದೇಶದ ಅಭಿವೃದ್ಧಿ ನಡೆಯುತ್ತಾ ಸಾಗುತ್ತದೆ ಎಂದವರು ಉದಾಹರಣೆ ಸಹಿತ ಮನನ ಮಾಡಿದರು.

ಎರಡನೇ ಶತಮಾನದಲ್ಲಿ ಕಾಡಿನಲ್ಲಿ ಹೆಚ್ಚಾಗಿದ್ದ ಜನರು ನಾಡಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ಈಗ ಕಾಡಿನಲ್ಲಿ ಇರುವವರು ಅಲ್ಪಸಂಖ್ಯಾತರಾಗಿದ್ದು ಅವರ ಬಗ್ಗೆಯೂ ನಾವು ಗಂಬೀರವಾಗಿ ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.

ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಂಡು ಕಥೆಗಾರರು ಮತ್ತು ನಮ್ಮ ಭಾಷೆ ಬೆಳಗಬೇಕಾದರೆ ಪ್ರತಿಯೊಬ್ಬರು ಕನ್ನಡ ಪುಸ್ತಕ ಕೊಂಡು ಓದಿ ಭಾಷೆಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ನಮ್ಮ ಕರುಳು ಮತ್ತು ಕೊರಳಿನ ಭಾಷೆಯಾಗಿರುವ ಕನ್ನಡದ ಬೆಳವಣಿಗೆಗೆ ಎಲ್ಲರೂ ಹೆಗಲುಕೊಟ್ಡು ದುಡಿಯಬೇಕೆಂದರು.

ಭಾಷೆಯನ್ನು ಉಳಿಸಿ ಬೆಳೆಸಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದ್ದು, ಇದನ್ನು ಅರಿತು ನಮ್ಮೊಡನೆ ಇರುವ ಪರಭಾಷಿಕರಿಗೂ ಕನ್ನಡ ಕಲಿಸಿ ಅದರ ಸೊಗಡು ಮತ್ತು ಇತಿಹಾಸವನ್ನು ತಿಳಿಸುವ ಕರ್ತವ್ಯವನ್ನು ಎಲ್ಲರೂ ನಿಭಾಯಿಸಿದಾಗ ಕನ್ನಡದ ಕಂಪು ಜಗತ್ತಿನೆಲ್ಲೆಡೆ ಪಸರಿಸುತ್ತದೆ ಎಂದರು.

ಪ್ರಕಾಶಕ ಸೃಷ್ಟಿ ನಾಗೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ತಂಬಾಕು ಹರಾಜು ಮಾರುಕಟ್ಟೆ ನಿವೃತ್ತ ಅಧೀಕ್ಷಕ ಕೆ.ಎನ್.ದಿನೇಶ್, ಸಾಹಿತಿ ಹೆಗ್ಗಂದೂರುಪ್ರಭಾಕರ್, ಪುರಸಭೆ ಸದಸ್ಯ ಕೆ.ಪಿ.ಪ್ರಭುಶಂಕರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಜಿ.ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ನವ ನಗರ ಬ್ಯಾಂಕ್ ನಿರ್ದೇಶಕ ಕೇಶವ್, ಮುಖಂಡರಾದ ಹೆಬ್ಬಾಳು ವೇಣುಗೋಪಾಲ್, ನಾಗೇಶ್, ರಂಗನಾಥ್, ಎಸ್.ಆರ್.ಆನಂದ್ ಮತ್ತಿತರರು ಇದ್ದರು.