ಎಚ್.ಡಿ.ಕೋಟೆ ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆ ಆಯೋಜಿಸಲಾಗಿತ್ತು. ಡಾ.ಟಿ.ರವಿಕುಮಾರ್, ರಾಜೇಶ್ವರಿ, ರವಿ, ರವಿರಾಜ್, ಅರ್ಚನಾ, ರೇಖಾ, ಆಸೀಮ ಸುಲ್ತಾನ್, ಮಾನಸ ಇತರರು ಇದ್ದರು. 
ಜಿಲ್ಲೆ

ನಿಯಾಮನುಸಾರ ಅನುದಾನ ಬಳಕೆಯಾಗಲಿ

ವಸಂತಕುಮಾರ್ ಬಿ

ಎಚ್.ಡಿ.ಕೋಟೆ: ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳಿಗೆ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆರೋಗ್ಯ ಕೇಂದ್ರಗಳ ಸಿಂಗಲ್ ನೋಡಲ್ ಅಕೌಂಟ್ ಖಾತೆಗೆ ಅನುದಾನ ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ, ಲಭ್ಯವಿರುವ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ತಾಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಚಕ್ಕೊಡನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಆರೋಗ್ಯ ನೈರ್ಮಲ್ಯ ಯೋಜನೆಯಡಿ ಸರ್ಕಾರದಿಂದ ಬಿಡುಗಡೆ ಆಗುವ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂದು ಗ್ರಾಮ ಆರೋಗ್ಯ ಕುರಿತು ಚರ್ಚಿಸುವುದು ಹಾಗೂ 2025-26ನೇ ಸಾಲಿಗೆ ಸಂಬಂಧಿಸಿದಂತೆ ಗ್ರಾಮಗಳ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಸೂಚಿಸಿದರು.

ಆ.1ರಿಂದ 8ರವರೆಗೆ ವಿಶ್ವ ಸ್ತನ್ಯಪಾನ ಕಾರ್ಯಕ್ರಮವನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಆಚರಿಸಬೇಕು. ವಿಶ್ವಾಸ್ ಆಂದೋಲನದ ವ್ಯಾಪ್ತಿಯಲ್ಲಿ ಕೈ ತೊಳೆಯುವ ವಿಧಾನ ಮತ್ತು ಮಹತ್ವದ ಕುರಿತು ಸಭೆಗಳಲ್ಲಿ ಅರಿವು ಮೂಡಿಸುವುದು ಹಾಗೂ ಅಣಕು ಪ್ರದರ್ಶನವನ್ನು ಕೈಗೊಳ್ಳಬೇಕು ಎಂದರು.

2025-26ರ ಆರ್ಥಿಕ ವರ್ಷದಲ್ಲಿ ಆರೋಗ್ಯ ಕಾರ್ಯಕ್ರಮಗಳನ್ನು ಸಮುದಾಯ ಮಟ್ಟದಲ್ಲಿ ಅನುಷ್ಠಾನ ಮಾಡುವ ಬಗ್ಗೆ ರೂಪುರೇಷೆಗಳ ಕುರಿತು ಚರ್ಚಿಸಲು ಹಾಗೂ ಗೃಹ ಆರೋಗ್ಯ ಕಾರ್ಯಕ್ರಮದ ರೂಪುರೇಷೆ, ಸೌಲಭ್ಯ ಮತ್ತು ಸವಲತ್ತುಗಳು ಹಾಗೂ ಕಾರ್ಯಕ್ರಮದ ಅನುಷ್ಠಾನ ಕುರಿತ ಸಭೆಯಲ್ಲಿ ಚರ್ಚಿಸಬೇಕು. ಅಲ್ಲದೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಿಲ್ಕಾರಿ ದೂರವಾಣಿ ಕರೆ ಬಗ್ಗೆ ಗ್ರಾಮದಲ್ಲಿರುವ ಎಲ್ಲ ಗರ್ಭಿಣಿಯರ ನೋಂದಾಯಿತ ಮೊಬೈಲ್ ಫೋನ್‌ನಲ್ಲಿ ಕಿಲ್ಕಾರಿ ಸಂ. 01244451660 ಸೇವ್ ಮಾಡಿಸುವುದು ಹಾಗೂ ಆ ಕೆರೆಯನ್ನು ಸ್ವೀಕರಿಸಿ ಕನಿಷ್ಠ 3 ನಿಮಿಷಗಳ ಮಾಹಿತಿಯನ್ನು ಕೇಳಿಸಿಕೊಳ್ಳಲು ಪ್ರೇರಿಪಿಸುವುದು. ಪುನಃ ಕೇಳಲು ಕಿಲ್ಕಾರಿ ಸಹಾಯವಾಣಿ ಸಂಖ್ಯೆಗೆ 14423 ಕರೆ ಮಾಡಲು ಮಾಹಿತಿ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಸಮುದಾಯ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಡೆಂೆ, ಮಲೇರಿಯಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯ ಮಹಿಳೆಯರಿಗೆ ಅನೀಮಿಯಾ ಮತ್ತು ಪೌಷ್ಟಿಕ ಆಹಾರ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಪಿಡಿಒ ರವಿ, ಟಿಎಚ್‌ಒ ಕಚೇರಿ ಸಿಬ್ಬಂದಿ ರವಿರಾಜ್, ಅರ್ಚನಾ, ರೇಖಾ, ಆಸೀಮ ಸುಲ್ತಾನ್, ಸಮುದಾಯ ಆರೋಗ್ಯ ಅಧಿಕಾರಿ ಮಾನಸ ಇತರರು ಇದ್ದರು.