ಹುನಗುಂದ: ಪದವಿ ಹಂತದ ಶಿಕ್ಷಣ ವಿದ್ಯಾರ್ಥಿ ಜೀವನದ ಮಹತ್ವದ ಮೈಲಿಗಲ್ಲು. ಅಂತಹ ಸಂದರ್ಭದಲ್ಲಿ ಬಾಹ್ಯ ಒತ್ತಡ, ಪ್ರಚೋದನೆಗಳಿಗೆ ಒಳಗಾಗದೆ ನಿರಂತರ ಅಧ್ಯಯನಶೀಲನಾದವನಿಗೆ ಮಾತ್ರ ವಿದ್ಯೆ ಒಲಿಯುತ್ತದೆ. ಪದವೀಧರರು ಸಮಾಜಮುಖಿ ಚಿಂತನೆ ಉಳ್ಳವರಾಗಿರಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ 2024 - 25 ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ, ಜನಪದ ಉತ್ಸವ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದ ವೆಂಕಪ್ಪ ಸುಗತೇಕರ್ ಮಾತನಾಡಿ, ಗುರು ಕಾರುಣ್ಯವಿಲ್ಲದೆ ಯಾವ ಕಾರ್ಯವು ಅಸಾಧ್ಯ. ಪದವಿ ನಂತರದ ಅವಧಿಯಲ್ಲಿ ವಿದ್ಯಾರ್ಥಿಗಳು ಸದ್ವರ್ತನೆ ಬೆಳೆಸಿಕೊಳ್ಳಬೇಕು ಎಂದರು.
2024 -25 ನೇ ಸಾಲಿನ ಮಹಾವಿದ್ಯಾಲಯದ ಕಾರ್ಯ ಚಟುವಟಿಕೆಗಳನ್ನು ಉಪನ್ಯಾಸಕ ಶಿವಶಂಕರ ಪ್ರಸಾದ್ ಸಾದರಪಡಿಸಿದರು. ವಿಶ್ವವಿದ್ಯಾಲಯ ಹಂತದಲ್ಲಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಪದ್ಮಶ್ರೀ ಪುರಸ್ಕೃತ ಜನಪದ ಕಲಾವಿದ ವೆಂಕಪ್ಪ ಸುಗತೇಕರ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಸಿಕಂದರ್ ಧನ್ನೂರ ಮಾತನಾಡಿದರು. ಕ್ರೀಡಾ ನಿರ್ದೇಶಕ ಬಿ.ವೈ. ಆಲೂರು ಸ್ವಾಗತಿಸಿದರು. ಉಪನ್ಯಾಸಕ ಡಾ. ಎಚ್.ಎಸ್ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮುರ್ತುಜಾ ಬಿ. ಒಂಟಿ ಕಾರ್ಯಕ್ರಮ ನಿರೂಪಿಸಿದರು. ವೆಂಕಪ್ಪ ಸುಗತೇಕರ್ ತಂಡದಿಂದ ಗೊಂದಲಿಗರ ಪದಗಳ ಗಾಯನ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.