ಕಾರಟಗಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ ಹಮ್ಮಿಕೊಂಡಿದ್ದ ತಾಲೂಕಿನ ಗಣತಿದಾರರಿಗೆ ತರಬೇತಿ ಕಾರ್ಯಾಗಾರ ಕಾರ್ಕ್ರಮವನ್ನು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಉದ್ಘಾಟಿಸಿದರು. ತಾಪಂ ಇಒ ಲಕ್ಷ್ಮೀದೇವಿ, ಕೆಪಿಎಸ್‌ನ ಪ್ರಾಚಾರ್ಯ ನಾಗರಾಜ, ಉಪಪ್ರಾಚಾರ್ಯ ಶರಣಪ್ಪ ಸೋಮಲಾಪೂರ ಇತರರಿದ್ದರು. 
ಜಿಲ್ಲೆ

ಸರ್ಕಾರದ ಆದೇಶ ಪಾಲನೆ ಆಗಲಿ

ಗಾಯತ್ರಿ ಮಾಲಿಪಾಟೀಲ್

ಕಾರಟಗಿ: ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಗಣತಿದಾರರು ಸರ್ಕಾರದಿಂದ ಕಾಲಕಾಲಕ್ಕೆ ಬರುವ ಆದೇಶ, ಮಾರ್ಗಸೂಚಿ ಹಾಗೂ ನಿರ್ದೇಶನದಂತೆ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗಾಗಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕಿನ ಗಣತಿದಾರರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯಾದ್ಯಂತ ಸೆ.22ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದೆ. ಭೌತಿಕ ಮತ್ತು ಆನ್‌ಲೈನ್ ಆ್ಯಪ್‌ಗಳನ್ನು ಬಳಸಲಾಗುತ್ತಿದ್ದು, ಡೇಟಾ ಸಂಗ್ರಹಣೆ ಸಮರ್ಥವಾಗಿ ನಿಭಾಯಿಸಬೇಕು. ಸಮೀಕ್ಷೆಗೆ ಇ-ಕೆವೈಸಿ ಕಡ್ಡಾಯವಾಗಿದ್ದು, 6 ವರ್ಷ ಮೇಲ್ಪಟ್ಟ ಮಕ್ಕಳ ಕುಟುಂಬದ ಪ್ರತಿ ಸದಸ್ಯರ ಮಾಹಿತಿ ಆಧಾರ್ ಸಂಖ್ಯೆಯೊಂದಿಗೆ ಪಡೆಯಬೇಕು. 6 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಎನ್ರೋಲ್‌ಮೆಂಟ್ ಸಂಖ್ಯೆಯೊಂದಿಗೆ ಮಾಹಿತಿ ಸಂಗ್ರಹಿಸಬೇಕು. ನಿಗದಿತ ಕಾಲಮಿತಿಯೊಳಗೆ ಸಂಬಂಧಿಸಿದ ಗಣತಿದಾರರು ಮಾಹಿತಿ ಪಡೆಯಬೇಕು ಎಂದರು.

ತಾಪಂ ಇಒ ಲಕ್ಷ್ಮೀದೇವಿ ಮಾತನಾಡಿ, ಸಮೀಕ್ಷೆಗೆ ನಿಯೋಜನೆಯಾದ ಶಿಕ್ಷಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಬೇಕಿದೆ. ಪ್ರತಿ ಗಣತಿದಾರರಿಗೆ 120ರಿಂದ 150 ಕುಟುಂಬಗಳಂತೆ ಬ್ಲಾಕ್ ವಿಂಗಡಿಸಿ ಹಂಚಿಕೆ ಮಾಡಲಾಗುತ್ತಿದ್ದು, ಪ್ರತಿ 10 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡುತ್ತಾರೆ. ಎಲ್ಲ ಮೇಲ್ವಿಚಾರಕರು ಸಮೀಕ್ಷೆ ಪ್ರಗತಿಯ ವಿವರಗಳನ್ನು ಸಂಬಂಧಿಸಿದ ತಾಲೂಕಿನ ತಹಸೀಲ್ದಾರ್‌ಗೆ ಪ್ರತಿ ದಿನ ವರದಿ ನೀಡಬೇಕು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿಠಲ್ ಜೀರಗಾಳಿ, ನೀರಾವರಿ ಇಲಾಖೆ ಎಇಇ ನಾಗಪ್ಪ, ಕೆಪಿಎಸ್‌ನ ಪ್ರಾಚಾರ್ಯ ನಾಗರಾಜ, ಉಪಪ್ರಾಚಾರ್ಯ ಶರಣಪ್ಪ ಸೋಮಲಾಪೂರ ಇತರರಿದ್ದರು.