ವಿಜಯಪುರದ ಪಿಡಿಜೆ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು. ಡಿ.ಕೆ. ಕುಲಕರ್ಣಿ, ಕೆ.ಕೆ. ಚವ್ಹಾಣ, ಭಾರತಿ ಪಾಟೀಲ ಮತ್ತಿತರರಿದ್ದಾರೆ.  
ಜಿಲ್ಲೆ

ಸರ್ಕಾರದ ಯೋಜನೆ ಸದುಪಯೋಗವಾಗಲಿ; ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷಿ ಯೋಜನೆಗಳ ವಿವರ ಪಡೆದು ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಂಸದ ರಮೇಶ ಜಿಗಿಜಿಣಗಿ ಹೇಳಿದರು.

ನಗರದ ಪಿಡಿಜೆ ಪಪೂ ಕಾಲೇಜಿನಲ್ಲಿ ಬುಧವಾರ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ ವಿಜಯಪುರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸ್ವಚ್ಛ ಭಾರತ, ಏಕ ಭಾರತ ಶ್ರೇಷ್ಠ ಭಾರತ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ಕೇಂದ್ರ ಸರ್ಕಾರದ ಯೋಜನೆಗಳು, ಪ್ರಧಾನಮಂತ್ರಿಯವರ ದೂರದರ್ಶಿತ್ವ-2047, ವೋಕಲ್ ಪಾರ್ ಲೋಕಲ್ ಹಾಗೂ ಇತರೆ ಯೋಜನೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಜನ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ವಿಜಯಪುರ ಜಿಲ್ಲೆ ಉತ್ತಮ ರಸ್ತೆ ಸೇರಿದಂತೆ ಹೆದ್ದಾರಿಗಳನ್ನು ಹೊಂದಿದೆ. ಕೇಂದ್ರ ಸರ್ಕಾರದ ಯೋಜನೆಗಳಿಂದ ರಾಜ್ಯ ಅಭಿವೃದ್ಧಿಯಲ್ಲಿ ದಾಫುಗಾಲು ಇಡುತ್ತಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ. ಚವ್ಹಾಣ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಲ್ಲೊಂದಾದ ಬೇಟಿ ಬಚಾವೂ ಬೇಟಿ ಪಡಾವೂ ಅಡಿಯಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣ, ಯಶಸ್ಸು ಕಂಡಿದ್ದು ಲಿಂಗಾನುಪಾತದಲ್ಲಿ ವಿಜಯಪುರ ಜಿಲ್ಲೆ ಸಾಕಷ್ಟು ಸುಧಾರಣೆ ಕಂಡಿದೆ. ಉಳಿದಂತೆ ಗರ್ಭಿಣಿ ಮತ್ತು ತಾಯಂದಿರ ಆರೋಗ್ಯ ರಕ್ಷಣೆಗೆ ಇಲಾಖೆ ಶ್ರಮಿಸಿದ್ದು ಜನರು ಅಂಗನವಾಡಿಗೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ವಾಸುದೇವ್ ಹೆರಕಲ್ ಹಾಗೂ ಮೇಲ್ವಿಚಾರಕಿ ಭಾರತಿ ಪಾಟೀಲ ಮಾತನಾಡಿದರು.
ಪ್ರಾಚಾರ್ಯೆ ಡಿ.ಕೆ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ರಾಹುಲ್ ಡೋಂಗ್ರೆ, ಗಾಂಧಿ ಉಪಾಸಕ ನೇತಾಜಿ ಗಾಂಧಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ. ಕೋಲೂರು, ನಾಗಪ್ಪ ಅಂಬಾಗೋಳ ಉಪಸ್ಥಿತರಿದ್ದರು. ಸಿ.ಕೆ. ಸುರೇಶ್ ಸ್ವಾಗತಿಸಿದರು. ಸಂತೋಷ್ ಹೆಗ್ಡೆ ಮತ್ತು ಎಚ್.ಜೆ. ದೇಸಾಯಿ ನಿರೂಪಿಸಿದರು. ಜಿ. ಆರ್. ಪುರಾಣಿಕ್ ವಂದಿಸಿದರು.