ಜಿಲ್ಲೆ

ಬಡವರ ಹಸಿವು ನೀಗಿಸಲಿ ಸರ್ಕಾರ

ಗಜೇಂದ್ರಗಡ: ಬಡವರ ಅನುಕೂಲಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯದ ಬಹುತೇಕ ಕಡೆ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್‌ಗಳು ಸಾವಿರಾರು ಜನರ ಹಸಿವು ನೀಗಿಸುತ್ತಿವೆ.

ಆದರೆ, 50 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಮಾತ್ರ ಈ ಸೌಲಭ್ಯ ಇಲ್ಲದಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ದಿನದಿಂದ ದಿನಕ್ಕೆ ಅತಿ ವೇಗವಾಗಿ ಬೆಳೆಯುತ್ತಿರುವ ಗಜೇಂದ್ರಗಡ ಪ್ರಮುಖ ವಾಣಿಜ್ಯ ಪಟ್ಟಣವಾಗಿ ಗುರುತಿಸಿಕೊಂಡಿದೆ.

ವ್ಯಾಪಾರ, ವಾಣಿಜ್ಯ, ಉದ್ಯೋಗ, ಶಿಕ್ಷಣ ಸೇರಿದಂತೆ ಹತ್ತಾರು ಕಾರ್ಯಗಳಿಗಾಗಿ ನಿತ್ಯವೂ ಸಾವಿರಾರು ಜನರು ಪಟ್ಟಣಕ್ಕೆ ಬಂದು ಹೋಗುತ್ತಾರೆ. ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಿದರೆ ಉದ್ಯೋಗ ಅರಸಿ ಬರುವವರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಬಡವರಿಗೆ ಅನುಕೂಲವಾಗುತ್ತದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿದೆ. ಕ್ಷೇತ್ರದಲ್ಲೂ ಅದೇ ಪಕ್ಷದ ಶಾಸಕರಿದ್ದಾರೆ. ಹೀಗಾಗಿ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಆಶಯವಾಗಿದೆ.

ರೋಣಕ್ಕೂ ಸಿಗಲಿ ಆದ್ಯತೆ

ರೋಣ ತಾಲೂಕು ಅತಿ ಹೆಚ್ಚು ಕೃಷಿ ಕಾರ್ಮಿಕರಿಂದ ಕೂಡಿದ್ದು, ಇಲ್ಲಿ ಕೈಗಾರಿಕೆಗಳು ಕಡಿಮೆ. ಹೀಗಾಗಿ ಗ್ರಾಮೀಣ ಭಾಗದ ಜನರು ಕೂಲಿ ಸೇರಿದಂತೆ ಇತರ ಉದ್ಯೋಗ ಅರಸಿ ರೋಣ ಪಟ್ಟಣಕ್ಕೆ ಬರುತ್ತಾರೆ. ರೋಣದಿಂದ ಬೇರ್ಪಟ್ಟ ನಂತರ ಗಜೇಂದ್ರಗಡಕ್ಕೆ ಪ್ರತ್ಯೇಕ ತಾಲೂಕು ಸ್ಥಾನ ಸಿಕ್ಕರೂ ಬಹುತೇಕ ತಾಲೂಕು ಕಚೇರಿಗಳು ಇನ್ನೂ ರೋಣದಿಂದಲೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಕಚೇರಿ ಕೆಲಸಗಳಿಗಾಗಿ ನಿತ್ಯವೂ ಹಲವಾರು ಜನರು ರೋಣಕ್ಕೆ ಹೋಗುತ್ತಾರೆ. ಅಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ನಾಗರಿಕರು.

ಸುಮಾರು 8 ವರ್ಷಗಳ ಕಾಲ ಗಜೇಂದ್ರಗಡ, ರೋಣ, ನರೇಗಲ್ಲ, ಹಿರೇಹಾಳ, ಮುಶಿಗೇರಿ ಹಾಗೂ ಡಂಬಳದಲ್ಲಿ ನಮ್ಮ ತಾಯಿ ಬಸಮ್ಮ ಪಾಟೀಲ ಅವರ ಹೆಸರಿನಲ್ಲಿ ಕಡಿಮೆ ವೆಚ್ಚದಲ್ಲಿ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಗಜೇಂದ್ರಗಡ ಬೆಳೆಯುತ್ತಿರುವ ಪಟ್ಟಣವಾಗಿರುವುದರಿಂದ ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿ.ಎಸ್. ಪಾಟೀಲ, ಶಾಸಕ