ವಿಜಯಪುರ: ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಕೆಪಿಸಿಸಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಕಚೇರಿ ಹೊರಾವರಣದಲ್ಲಿ ಕಳೆದ 28 ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಮುಷ್ಕರಕ್ಕೆ ಬುಧವಾರ ಬೆಂಬಲ ಸೂಚಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆ ನ್ಯಾಯಯುತವಾಗಿದೆ. ಸಂಕಷ್ಟದ ಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲಾಗದಷ್ಟು ದೊಡ್ಡದೇನಲ್ಲ. ಹೀಗಾಗಿ ಸರ್ಕಾರ ತ್ವರಿತವಾಗಿ ಸ್ಪಂದಿಸಬೇಕೆಂದರು.
ಅತಿಥಿ ಉಪನ್ಯಾಸಕರ ನೋವಿನ ಕಥೆ ಕೇಳಿದರೆ ದುಃಖವಾಗುತ್ತದೆ. ಕಳೆದ ಎರಡು ದಶಕಗಳಿಂದಲೂ ಯಾವುದೇ ಪಕ್ಷದ ಸರ್ಕಾರವಿದ್ದಾಗಲೂ ಯಾವ ಮುಖ್ಯಮಂತ್ರಿಯೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎನ್ನುವುದು ಅವರ ನೋವಾಗಿದೆ. ಈಗಾಗಲೇ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲರು ಸುವರ್ಣ ಸೌಧದ ಮುಂದೆ ಧರಣಿ ನಿರತರನ್ನು ಭೇಟಿಯಾಗಿ ಅವರ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನ ಕೂಡ ಸೆಳೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಶೀಘ್ರದಲ್ಲಿ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದರು.
ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸುರೇಶ ಡಬ್ಬಿ, ಡಾ. ಆನಂದ ಕುಲಕರ್ಣಿ, ಡಾ.ಎಸ್.ಐ. ಯಂಭತ್ನಾಳ, ಡಾ.ಸುರೇಶ ಬಿರಾದಾರ, ಡಿ.ಬಿ. ಕುಲಕರ್ಣಿ ಮತ್ತಿತರರಿದ್ದರು.