ನರಗುಂದ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೆಹಲಿಯ ಶಂಭು ಗಡಿಯಲ್ಲಿ ರೈತ ಮುಖಂಡ ದಲೈವಾಲಾ 34 ದಿನಗಳಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿರುವ ರೈತನ ಜೀವ ಉಳಿಸಲು ಕೇಂದ್ರ ಸರ್ಕಾರ ತಕ್ಷಣ ಮಾತುಕತೆಗೆ ಮುಂದಾಗಬೇಕು ಎಂದು ರಾಜ್ಯ ರೈತ ಸಂಘ, ಹಸಿರುಸೇನೆ ಸಂಘಟನೆ ಸದಸ್ಯರು ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಪ್ರಧಾನಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ವಿಠ್ಠಲ ಜಾಧವ ಮಾತನಾಡಿ, ಮೂರು ಕೃಷಿ ಕಾಯ್ದೆ ರದ್ದುಪಡಿಸುವುದು, ಡಾ. ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಆಮರಣ ಉಪವಾಸ ಕೈಗೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರ ವಿವಿಧ ಬೇಡಿಕೆ ಡೇರಿಸುವಂತೆ ಮೂರು ವರ್ಷದಿಂದ ನಿರಂತರ ಹೋರಾಟ ಮುಂದುವರಿಸಲಾಗಿದೆ. 34 ದಿನಗಳಿಂದ ಆಮರಣ ಉಪವಾಸ ಕೈಗೊಂಡಿರುವ ದಲೈವಾಲಾ ಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಕ್ಷಣದಲ್ಲಾದರೂ ಆರೋಗ್ಯದಲ್ಲಿ ಏರು-ಪೇರಾಗಿ ಪ್ರಾಣ ಹಾನಿ ಸಂಭವಿಸಿದರೆ ಮುಂದಾಗುವ ಅನಾಹುತಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದರು.
ರಾಘವೇಂದ್ರ ಗುಜಮಾಗಡಿ, ಮನೋಹರ ಹುಯಿಲಗೋಳ, ಈರಮ್ಮ ಮೇಟಿ, ಚನ್ನು ನಂದಿ, ರವಿ ಒಡೆಯರ್, ವಾಸುರಡ್ಡಿ ಹೆಬ್ಬಾಳ, ಹನುಮಪ್ಪ ದೊಡಮನಿ, ಸುಭಾಸ ನೀಲರಡ್ಡಿ, ಇತರರು ಉಪಸ್ಥಿತರಿದ್ದರು.