ಜಿಲ್ಲೆ

ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಲಿ

ಶಿಗ್ಗಾಂವಿ: ಸತತವಾಗಿ ಸುರಿದ ಮಳೆಯಿಂದ ರೈತರ ಬೆಳೆ ಕೊಚ್ಚಿ ಹೋಗಿದೆ. ತಕ್ಷಣ ಕಾಂಗ್ರೆಸ್ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಿ, ಅವರ ನೆರವಿಗೆ ಬರಬೇಕು ಎಂದು ತಾಲೂಕು ನಿಕಟಪೂರ್ವ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಆಗ್ರಹಿಸಿದ್ದಾರೆ.

ಶನಿವಾರ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿ, ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದ ರೈತರ ಬೆಳೆ ಹಾನಿಗೀಡಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಎಕರೆಗೆ 40 ರಿಂದ 50 ಸಾವಿರ ರೂ. ವ್ಯಯಿಸಿ ಬೆಳೆದಿದ್ದ ಫಸಲೆಲ್ಲ ನೀರುಪಾಲಾಗಿ, ರೈತರು ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ರೈತರ ಕಷ್ಟವನ್ನು ಕಾಂಗ್ರೆಸ್ ಸರ್ಕಾರ ಕಿವಿಯಿಂದ ಕೇಳಿ ಕಣ್ಣಿಂದ ಕಂಡು ವಾಸ್ತವ ಸ್ಥಿತಿ ಅರಿತು ರೈತರ ಸಹಾಯಕ್ಕೆ ತಕ್ಷಣಕ್ಕೆ ಸ್ಪಂದಿಸಬೇಕು. ಒಂದೆಡೆ ಬೆಳೆ ನೀರು ಪಾಲು, ಮತ್ತೊಂದೆಡೆ ಸೋರುವ ಮನೆ ಹಾಗೂ ಸಾಲಗಾರನ ಕಿರುಕುಳ ಇವುಗಳಿಂದ ಬೇಸತ್ತ ರೈತರಿಗೆ ಕಾಂಗ್ರೆಸ್ ಸರ್ಕಾರ ಸಹಾಯ ಮಾಡಬೇಕು. ಶೀಘ್ರವೇ ಕ್ಯಾಬಿನೆಟ್ ಸಭೆ ಕರೆದು ಎಕರೆಗೆ ಕನಿಷ್ಠ 50ರಿಂದ 60 ಸಾವಿರ ರೂ. ಗಳ ಬೆಳೆ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಮ್ಯಾಗೇರಿ ಒತ್ತಾಯಿಸಿದ್ದಾರೆ.