ಬಾದಾಮಿ ನಗರದ ಕಾನಿಪ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಮಾತನಾಡಿದರು. ಪ್ರಕಾಶ ಗಾಣಿಗೇರ, ಎಂ.ಎಸ್.ಹಿರೇಹಾಳ, ಮಲ್ಲಿಕಾರ್ಜುನ ಹಡಪದ ಇತರರಿದ್ದರು. 
ಜಿಲ್ಲೆ

ಸರ್ಕಾರ ಯೋಗ್ಯ ಪರಿಹಾರ ತುರ್ತಾಗಿ ನೀಡಲಿ - ಹನುಮಂತ ಮಾವಿನಮರದ ಒತ್ತಾಯ

Bagalkot

ಬಾದಾಮಿ: ಕಳೆದ 8-10 ದಿನಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದ ಕಾರಣ ತಾಲೂಕಿನ ರೈತರ ಜಮೀನು ಮನೆ, ಬೆಳೆ, ಆಸ್ತಿ ಹಾನಿಯಾಗಿದೆ. ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಘೋಷಿಸಬೇಕು ಎಂದು ಜಿಪಂ ಮಾಜಿ ಉಪಾಧ್ಯಕ್ಷ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹನುಮಂತ ಮಾವಿನಮರದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹಿಸಿದರು.

ಕಳೆದ ಸೆ.5 ರಂದು ಸುರಿದ ಅಪಾರ ಪ್ರಮಾಣದ ಮಳೆಯಿಂದ ಅಂದಾಜು 12,700 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಗುಳೇದಗುಡ್ಡ ತಾಲೂಕಿನಲ್ಲಿ 2500 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈಗ ಒಣಬೇಸಾಯದ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 25 ಸಾವಿರ ರೂ., ನೀರಾವರಿಗೆ 50 ಸಾವಿರ ರೂ. ಪರಿಹಾರ ಧನ ನೀಡಬೇಕು ಎಂದು ನಗರದ ಕಾನಿಪ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನದಿ ದಡದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಅಂದಾಜು 350 ಮನೆಗಳಿಗೆ ಹಾನಿಯಾಗಿದೆ. ಹಾಲಿಗೇರಿ, ರಡ್ಡೇರ ತಿಮ್ಮಾಪುರ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಗ್ಯರಿಗೆ ಅನುದಾನ ಸಿಗುತ್ತಿಲ್ಲ. ಶಾಸಕರು ಹೆಚ್ಚಿನ ಅನುದಾನ ಕೊಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಪ್ರಕಾಶ ಗಾಣಿಗೇರ, ಮುಖಂಡರಾದ ಎಂ.ಎಸ್.ಹಿರೇಹಾಳ, ಮಲ್ಲಿಕಾರ್ಜುನ ಹಡಪದ, ಚಂದ್ರು ಸೂಡಿ, ಶರಣಪ್ಪ ಮಾವಿನಮರದ, ಪ್ರಕಾಶ ಕೋಟಿ, ರಿಯಾಜ್ ಜಮಾದಾರ, ಬಸವರಾಜ ಅಮರಗೋಳ ಇದ್ದರು.