ಜಿಲ್ಲೆ

ಪಾಠದ ಜತೆ ಇರಲಿ ಆಟ

Davangere - Desk - Mahesh Babu E

ಪರಶುರಾಮಪುರ: ಗ್ರಾಮೀಣ ಪ್ರದೇಶದ ಮಕ್ಕಳು ಓದಿನ ಜತೆ ಕ್ರೀಡಾಕೂಟ ಇತರ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇದರಿಂದ ಸಮಗ್ರ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಹಿರಿಯ ಮುಖಂಡ, ದಾನಿ ಜೆ.ಎಂ.ಮನೋಹರ ಹೇಳಿದರು.

ಜಾಜೂರು ಗ್ರಾಮದ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಶುರಾಮಪುರ ಹೋಬಳಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಆಂಧ್ರಗಡಿ ಜಾಜೂರು ಗ್ರಾಮದಲ್ಲಿ ಹಲವು ವರ್ಷಗಳ ನಂತರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಇದು ಇಲ್ಲಿನ ಪ್ರತಿಭೆಗಳು ಮತ್ತು ಮಕ್ಕಳಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದೆ ಎಂದರು.

ಇಂತಹ ಕ್ರೀಡಾಕೂಟ ಹಾಗೂ ಕಾರ್ಯಕ್ರಮ ಆಯೋಜಿಸಲು ಸಂಘ-ಸಂಸ್ಥೆಗಳು, ಶ್ರೀಮಂತರು ಹೆಚ್ಚು ಸಹಕಾರ ನೀಡಿದರೆ ನಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ ಮಾತನಾಡಿ, ಶಾಲೆ ಎಂದಾಕ್ಷಣ ಓದು, ಅಂಕ ಗಳಿಕೆಗೆ ಮಕ್ಕಳನ್ನು ಸೀಮಿತಗೊಳಿಸಬಾರದು. ಅವರಲ್ಲಿನ ಪ್ರತಿಭೆ ಹೊರತರುವ ಕೆಲಸ ಪಾಲಕರು ಮತ್ತು ಶಿಕ್ಷಕರು ಮುಂದಾಗಬೇಕು. ಇಂತಹ ಕ್ರೀಡಾಕೂಟಗಳಿಂದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದರು.

ಬಿಜೆಪಿ ಮುಖಂಡ ಸೋಮಶೇಖರ ಮಂಡೀಮಠ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಆಟ ಯಾವುದೇ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸೋಲು-ಗೆಲುವು ಕುರಿತು ಹೆಚ್ಚು ಚಿಂತನೆ ಮಾಡಬೇಕಿಲ್ಲ. ಸೋತವರು ಮುಂದೊಂದು ದಿನ ಗೆಲುವು ಸಾಧಿಸುತ್ತಾರೆ. ಗೆದ್ದವರು ಇನ್ನೂ ಹೆಚ್ಚು ಕಠಿಣ ಅಭ್ಯಾಸ ಮಾಡಿ ಸಾಧನೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಮುಖ್ಯಶಿಕ್ಷಕ ಕರಿಯಣ್ಣ, ಸಂಘಟಕ ಈರಣ್ಣ, ಬೊಮ್ಮಯ್ಯ, ಹನುಮಂತರಾಯ, ಪ್ರಕಾಶ, ಕಲ್ಲೇಶ, ಪ್ರಭು, ಸಿಆರ್‌ಪಿ ನಳಿನಾಕ್ಷಿ ಶಿಕ್ಷಕರಾದ ಸತೀಶ, ಸುರೇಶ, ಲೋಕೇಶ, ಸತೀಶ ಇತರರಿದ್ದರು.