ನಗರದಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿಗೆ ಸಂಗೀತಾ ಯು.ಹಿಲ್ಕುಂಜಿ ಚಾಲನೆ ನೀಡಿದರು. ಎ.ಚಂದ್ರ, ಕರುಣಾಕರ ಶೆಟ್ಟಿ, ಸುಮನಾ ಭಾಸ್ಕರ್, ನಾಗಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಪ್ರತಿಭಾ ಕಾರಂಜಿ ಸಾಂಕೇತಿಕವಾಗದಿರಲಿ

ಹೊಸನಗರ: ಸರ್ಕಾರ ಮತ್ತು ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ಪ್ರತಿಭಾ ಕಾರಂಜಿ ಸಾಂಕೇತಿಕವಾಗಿರದೆ, ಮಕ್ಕಳ ಪ್ರತಿಭೆಯ ಕನ್ನಡಿಯಾಗಿ ಹೊರಹೊಮ್ಮಬೇಕು ಎಂದು ಮೂಡುಗೊಪ್ಪ ಗ್ರಾಪಂ ಅಧ್ಯಕ್ಷೆ ಸಂಗೀತಾ ಯು.ಹಿಲ್ಕುಂಜಿ ಹೇಳಿದರು.

ನಗರ ಸರ್ಕಾರಿ ಬಾಲಕರ ಶಾಲೆಯಲ್ಲಿ ಏರ್ಪಡಿಸಿದ್ದ ಮೂಡುಗೊಪ್ಪ, ಅಂಡಗದೋದೂರು, ಅರಮನೆಕೊಪ್ಪ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರ ತೆಗೆಯುವ ಕೆಲಸ ಆಗಬೇಕು ಎಂದರು. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಅದ್ಭುತ ಪ್ರತಿಭೆಯ ಮಕ್ಕಳಿದ್ದಾರೆ. ಆದರೆ ಅವರ ಪ್ರತಿಭೆಗೆ ಸೂಕ್ತ ಸವಲತ್ತು, ವೇದಿಕೆ ಒದಗಿಸಲು ಕೆಲವೊಮ್ಮೆ ಸಾಧ್ಯವಾಗುತ್ತಿಲ್ಲ. ಆ ಕೊರತೆಯನ್ನು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳು ನೀಗಿಸಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಎ.ಚಂದ್ರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಸಂಘಟಿಸುವುದು ಸುಲಭದ ಮಾತಲ್ಲ. ಇಲ್ಲಿಯ ಪಾಲಕರು ಮತ್ತು ಗ್ರಾಮಸ್ಥರ ಸಹಕಾರ ಮಹತ್ವದ್ದಾಗಿದೆ ಎಂದರು. ನಗರ ಕ್ಲಸ್ಟರ್ ಸಿಆರ್‌ಪಿ ಕೆ.ಆರ್.ರವಿ, ಗ್ರಾಪಂ ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪಿಡಿಒ ರಾಮಚಂದ್ರ, ಎಸ್‌ಡಿಎಂಸಿ ಉಪಾಧ್ಯಕ್ಷೆ ರಾಧಾ, ಮುಖ್ಯಶಿಕ್ಷಕಿ ನಾಗಲಕ್ಷ್ಮೀ, ಪ್ರಮುಖರಾದ ಸುಶೀಲಾ, ಕೆ.ರಮೇಶ, ನವೀನ ಇತರರಿದ್ದರು. ಶಿಕ್ಷಕಿ ಶಾಂತಾ ಕಾರ್ಯಕ್ರಮ ನಿರೂಪಿಸಿದರು.