ಗೋಣಿಕೊಪ್ಪ: ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯುವ ಮೂಲಕ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದು ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಇದರಿಂದಾಗಿ ಸತ್ಯಕ್ಕೆ ಜಯ ಲಭಿಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ತಿಳಿಸಿದರು.
ಗಣಪತಿ ಆತ್ಮಹತ್ಯೆ ಪ್ರಕರಣ ಸಂದರ್ಭದಲ್ಲಿ ಕೊಡಗಿನ ಆಗಿನ ಶಾಸಕರು, ಕಾಂಗ್ರೆಸ್ ನಾಯಕ, ಕೊಡಗು ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮೇಲೆ ಅನವಶ್ಯಕ ಆರೋಪ ಮಾಡಿದ್ದರು. ಆತ್ಮಹತ್ಯೆ ಪ್ರಕರಣಗಳಲ್ಲಿ ಸಚಿವರ ಪಾತ್ರ ಇಲ್ಲದಿದ್ದರೂ ಇದನ್ನು ರಾಜಕೀಯವಾಗಿ ವೈಭವೀಕರಿಸಿ ಪ್ರಕರಣದಲ್ಲಿ ಸಚಿವರ ಪಾತ್ರ ಇದೆ ಎಂಬ ಆರೋಪ ಮಾಡಿದ್ದರು. ಇದೀಗ ನ್ಯಾಯಾಲಯ ಸಮಗ್ರ ತನಿಖೆ ನಡೆಸುವ ಮೂಲಕ ಪ್ರಕರಣದಲ್ಲಿ ಚಾರ್ಜ್ ಅವರ ಯಾವುದೇ ಪಾತ್ರ ಇಲ್ಲದಿರುವ ಬಗ್ಗೆ ತೀರ್ಪು ನೀಡಿದೆ. ಇದರಿಂದಾಗಿ ಮಾಜಿ ಶಾಸಕರು ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್.ಪ್ರಥ್ವು, ಡಿಸಿಸಿ ಸದಸ್ಯರಾದ ಮುಕ್ಕಾಟಿರ ಸಂದೀಪ್, ಬಿ.ಶೆಟ್ಟಿಗೇರಿ ಗ್ರಾಪಂ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಬ್ಲಾಕ್ ಪ್ರ.ಕಾರ್ಯದರ್ಶಿಯಾದ ಎ.ಜೆ.ಬಾಬು, ಬಿ.ಶೆಟ್ಟಿಗೇರಿ ಜೋನಲ್ ಕಾಂಗ್ರೆಸ್ ಅಧ್ಯಕ್ಷ ಸದಾ ಉಪಸ್ಥಿತರಿದ್ದರು.