ಅರಸೀಕೆರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯನ್ನು ರೈತರು ಸದ್ಭಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಜಾವಗಲ್ ಹೋಬಳಿ ಗುಡ್ಡದ ಕೆಂಗನಹಳ್ಳಿ ಗ್ರಾಮದಲ್ಲಿ ಶನಿವಾರ ಕೃಷಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಗಿ ಬಿತ್ತನೆ ಬೀಜ, ಔಷಧ ವಿತರಿಸಿ ಮಾತನಾಡಿದರು.
ರೈತರು ಬೆಳೆಯುವ ಭತ್ತ, ರಾಗಿ, ತೊಗರಿ, ಜೋಳ ಸೇರಿದಂತೆ ಹಲವು ಧಾನ್ಯಗಳನ್ನು ಕೇಂದ್ರ ಸರ್ಕಾರ ಬೆಂಬಲ ಯೋಜನೆಯಡಿ ಖರೀದಿಸುವ ಮೂಲಕ ಅನ್ನದಾತರ ನೆರವಿಗೆ ಧಾವಿಸಿದ್ದು ರೈತರು ಆತಂಕ ಪಡುವ ಅಗತ್ಯವಿಲ್ಲ. ರಾಗಿ ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎನ್ನುವುದೇ ಹೆಮ್ಮೆಯ ಸಂಗತಿ. ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಂದ್ರಾಳು, ಕರುಗುಂದ ಒಳಗೊಂಡಂತೆ ಹತ್ತಾರು ಹಳ್ಳಿಗಳ 300 ಕ್ಕೂ ಹೆಚ್ಚಿನ ರೈತರಿಗೆ ತಲಾ ಐದು ಕೆ.ಜಿ. ಬ್ಯಾಗ್ ರಾಗಿ ಹಾಗೂ ಅಗತ್ಯ ಪೋಷಕಾಂಶವುಳ್ಳ ಔಷಧ ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುತ್ತಿರುವ ಎಲ್ಲ ಬಗೆಯ ಸವಲತ್ತುಗಳನ್ನು ಪಡೆದು ಆರ್ಥೀಕವಾಗಿ ಬಲಿಷ್ಠರಾಗಬೇಕು. ನಷ್ಟ ಪರಿಹಾರ ಪಡೆಯುವ ದೃಷ್ಟಿಯಿಂದ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ರೈತರ ಹಿತ ಮನಗಂಡಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅನ್ನದಾತರ ಕಾಯಕಕ್ಕೆ ನೆರವಾಗಲಿ ಎಂದು ಎರಡು ಸಾವಿರ ರೂ.ಗಳನ್ನು ಖಾತೆಗೆ ಜಮೆ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿದೆ. ಕೇಂದ್ರದ ಐತಿಹಾಸಿಕ ನಿರ್ಧಾರದಿಂದ ದೇಶದ ಲಕ್ಷಾಂತರ ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಅಗತ್ಯ ವಸ್ತುಗಳನ್ನು ಪಡೆಯಲು ನೆರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೊಲ್ಲರಹಳ್ಳಿ ವಾಸು ಮಾತನಾಡಿ, ಉಭಯ ಸರ್ಕಾರಗಳು ರೈತರಿಗೆ ಬಿತ್ತನೆ ಬೀಜ, ಔಷಧ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ನೀಡುತ್ತಿವೆ. ಆಧುನಿಕ ತಂತ್ರಜ್ಞಾನದ ಜತೆಗೆ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ನಿರೀಕ್ಷೆಗೂ ಮೀರಿದ ಲಾಭಗಳಿಸಲು ಸಾಧ್ಯವಿದೆ ಎಂಬುದನ್ನು ಮನಗಾಣಬೇಕು ಎಂದರು.
ಜಾವಗಲ್ ಹೋಬಳಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಸುಬ್ರಮಣ್ಯ ಮಾತನಾಡಿದರು. ಹಂದ್ರಾಳು ಗ್ರಾಪಂ ಅಧ್ಯಕ್ಷ ಕುಮಾರ್, ಸದಸ್ಯರಾದ ಸಂಪತ್, ದಿನೇಶ್, ವಿಎಸ್‌ಎಸ್‌ಎನ್ ನಿರ್ದೇಶಕ ಬಸವರಾಜ್, ಮುಖಂಡರಾದ ಕೋಳಗುಂದ ರೇಣುಕಾ ಪ್ರಸಾದ್, ಕಲ್ಯಾಡಿ ಬಸವರಾಜ್, ನವೀನ್ ಸೇರಿದಂತೆ ಹಲವರು ಹಾಜರಿದ್ದರು.