ಜಿಲ್ಲೆ

ಇಳುವರಿ ಹೆಚ್ಚಳಕ್ಕೆ ರೈತರು ಯತ್ನಿಸಲಿ

ವೀರೇಶ ಸೌದ್ರಿ

ಕುಮಟಾ: ಜಿಲ್ಲೆಯ ಕರಾವಳಿ ಪ್ರದೇಶವು ತೆಂಗು ಬೆಳೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿದ್ದರೂ ಇತ್ತೀಚೆಗೆ ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಹುಡುಕಿ ಇಳುವರಿಯನ್ನು ವೈಜ್ಞಾನಿಕ ವಿಧಾನದಲ್ಲಿ ಹೆಚ್ಚಿಸಿಕೊಳ್ಳುವತ್ತ ರೈತರು ಮುಂದಾಗಬೇಕು ಎಂದು ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ನಿರ್ದೇಶಕ ಜೈನಾಥ್ ಹೇಳಿದರು.

ಇಲ್ಲಿನ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕಿನ ಮೂರೂರು ಜಿಲ್ಲಾ ಪಂಚಾಯಿತಿ ಹಾಗೂ ಚಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗು ಬೆಳೆಗಾರರ ಫಲಾನುಭವಿಗಳ ಆಯ್ಕೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚೇತನ ನಾಯ್ಕ ಮಾತನಾಡಿ, ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ಹುಟ್ಟಿಕೊಂಡಿರುವ ಎವಿಪಿ ಉತ್ಪಾದಕ ಸಂಸ್ಥೆಯವರು ಚಿಕ್ಕ ಬೆಳೆಗಾರರಿಗೂ ಯೋಜನೆಯ ಲಾಭ ತಲುಪುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಮಂಜು ಎಂ.ಜೆ. ಮಾತನಾಡಿ, ತೆಂಗು ಇಳುವರಿ ಹಾಗೂ ವಿವಿಧ ರೋಗಗಳ ನಿವಾರಣೆಗಾಗಿ ಈ ಯೋಜನೆಗೆ ಆಯ್ಕೆ ಮಾಡಿದ ಕ್ಷೇತ್ರ ಮಹತ್ವದ್ದಾಗಿದೆ ಎಂದರು.

ಎವಿಪಿ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ನಮ್ಮ ಸಂಸ್ಥೆಯಿಂದ ನಿಯೋಜನೆಗೊಂಡ ಎಲ್ಲ ಮರ ಕೊಯ್ಲು ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ತೆಂಗು ಅಭಿವೃದ್ಧಿ ಮಂಡಳಿಯು ಭವಿಷ್ಯ ನಿಧಿಯನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಈ ಯೋಜನೆಯ ಅನುಷ್ಠಾನಕ್ಕೆ ತಗುಲುವ ಖರ್ಚು ವೆಚ್ಚವನ್ನು ರೈತರು ಹಾಗೂ ಸಂಸ್ಥೆಯ ಪರಸ್ಪರ ಹೊಂದಾಣಿಕೆಯಿಂದ ನಡೆಸಲಾಗುತ್ತಿದೆ ಎಂದರು.

ಎವಿಪಿ ಸಂಸ್ಥೆಯ ಮೂಲಕ ಪ್ರಾತ್ಯಕ್ಷಿಕ ವಿಧಾನ ಅನುಷ್ಠಾನಕ್ಕಾಗಿ ಅರ್ಹರನ್ನು ಗುರುತಿಸಲಾಯಿತು. ಸಂಸ್ಥೆಯ ನಿರ್ದೇಶಕ ಕೃಷ್ಣ ನಾಯ್ಕ, ಈಶ್ವರ ಕೊಡಿಯಾ, ಇತರರಿದ್ದರು. ಎವಿಪಿ ಸಂಸ್ಥೆಯ ನಿರ್ದೇಶಕ ತಿಮ್ಮಣ್ಣ ಭಟ್ಟ ಸ್ವಾಗತಿಸಿದರು. ಪೃಥ್ವಿ ಜಿ. ನಾಯ್ಕ ವಂದಿಸಿದರು.