ಜಮಖಂಡಿ: ತಾಲೂಕಿನ ಮೂರು ಹೋಬಳಿಗಳಲ್ಲಿ ಕಳೆದ ವಾರದಿಂದ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದರಿಂದಾಗಿ ಬಿತ್ತನೆಗೆ ರೈತರು ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಇನ್ನೂ ಕೆಲವಡೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದಾರೆ ಎಂದು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ತಿಳಿಸಿದ್ದಾರೆ.
ಜನವರಿಯಿಂದ ಇಲ್ಲಿಯವರೆಗೆ ಜಮಖಂಡಿ ತಾಲೂಕಿನಲ್ಲಿ 79 ಮಿ.ಮೀ., ರಬಕವಿ-ಬನಹಟ್ಟಿ ತಾಲೂಕಿನಲ್ಲಿ 126 ಮಿ.ಮೀ. ಮಳೆಯಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ವಾಡಿಕೆಯಂತೆ ಮಳೆಯಾಗದಿರುವುದರಿಂದ ರೈತರು ಮಣ್ಣಿನಲ್ಲಿರುವ ತೇವಾಂಶ ಅರಿತು ಬಿತ್ತನೆ ಮಾಡುವುದು ಸೂಕ್ತ. ಬಿತ್ತನೆಗೆ ಮೊದಲು ಸಾವಯವ ಪದ್ಧತಿಯಿಂದ ಅಥವಾ ರಾಸಾಯನಿಕಗಳ ಬಳಕೆಯಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೀಜಗಳಿಂದ/ಮಣ್ಣಿನಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಬಹುದಲ್ಲದೆ, ಮೊಳಕೆ ಪ್ರಮಾಣ ಹೆಚ್ಚಿಸಿಕೊಳ್ಳಬಹುದಾಗಿದೆ. ಪ್ರಮುಖ ಬೆಳೆಗಳಾದ ಉದ್ದು, ಮೆಕ್ಕೆಜೋಳ, ಸಜ್ಜೆ, ಹೆಸರು, ತೊಗರಿ, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮುಂತಾದ ಬೆಳೆಗಳ ಬಿತ್ತನೆಗೆ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಮಖಂಡಿ, ಸಾವಳಗಿ ಹಾಗೂ ತೇರದಾಳ ಹೋಬಳಿಯಲ್ಲಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಜಮಖಂಡಿ ತಾಲೂಕಿನಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ 50,150 ಹೆಕ್ಟೇರ್ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 25,610 ಹೆಕ್ಟೇರ್‌ನಷ್ಟು ಅಂದಾಜಿಸಲಾಗಿದೆ. ಜಮಖಂಡಿ, ಸಾವಳಗಿ ಹಾಗೂ ತೇರದಾಳ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಸೂರ್ಯಕಾಂತಿ, ಹೆಸರು, ಉದ್ದು ಹಾಗೂ ಮೆಕ್ಕೆಜೋಳ ಒಳಗೊಂಡಂತೆ 470 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜ ಸಂಗ್ರಹಿಸಿಕೊಳ್ಳಲಾಗಿದ್ದು, ರೈತರು ದಾಖಲಾತಿ ಒದಗಿಸಿ ಬೀಜ ಖರೀದಿಸಬಹುದಾಗಿದೆ. ಈಗಾಗಲೇ ಕಳೆದ ವರ್ಷ ರೈತ ಸಂಪರ್ಕದಿಂದ ಬೀಜ ಖರೀದಿಸಿ ಬೆಳೆ ಬೆಳೆದು ದಾಸ್ತಾನು ಮಾಡಿದ್ದರೆ ಅದೇ ಬೀಜವನ್ನು ಇನ್ನೂ ಎರಡು ವರ್ಷ ಬಿತ್ತನೆಗೆ ಉಪಯೋಗಿಸಬಹುದಾಗಿದೆ.
ಜಮಖಂಡಿ ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ಬಿತ್ತನೆಗೆ ಹಾಗೂ ಬಿತ್ತನೆಯಾದ ನಂತರ ಅವಶ್ಯಕತೆಯಷ್ಟು ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಯೂರಿಯಾ 9,062 ಟನ್, ಡಿಎಪಿ 653 ಟನ್, ಸಂಯುಕ್ತ ಗೊಬ್ಬರ 5,552 ಟನ್, ಪೊಟ್ಯಾಷ್ 524 ಟನ್, ಇತರೆ ಗೊಬ್ಬರಗಳು 451ಟನ್ ದಾಸ್ತಾನು ಮಾಡಲಾಗಿದೆ.
ರೈತರು ಪರವಾನಗಿ ಪಡೆದು ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಆಧಾರ್ ಕಾರ್ಡ್ ಒದಗಿಸಿ ರಸಗೊಬ್ಬರ ಖರೀದಿಸಬೇಕು. ವಿವಿಧ ಬೆಳೆಗಳ ಶಿಾರಸಿನಂತೆ ಹಾಗೂ ಮಣ್ಣಿಗೆ ಅವಶ್ಯಕತೆ ಇದ್ದಷ್ಟು ಪೋಷಕಾಂಶಗಳನ್ನು ಬಳಸಿದಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ. ಈಗಾಗಲೇ ಮೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಗೆ ಬೀಜ ವಿತರಣೆ ಕಾರ್ಯ ಆರಂಭಿಸಲಾಗಿದೆ. ಆದ್ದರಿಂದ ರೈತರು ಅಗತ್ಯಕ್ಕೆ ತಕ್ಕಂತೆ ಬಿತ್ತನೆ ಬೀಜ ಖರೀದಿಸಿ ಶಿಾರಸಿನಂತೆ ರಸಗೊಬ್ಬರ ಬಳಸಿ ಬೆಳೆ ಬೆಳೆದು ಉತ್ತಮ ಇಳುವರಿ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.