ಜಿಲ್ಲೆ

ಸಂಘದ ಉಳಿವಿಗೆ ರೈತರು ನೆರವಾಗಲಿ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಸಹಕಾರ ಸಂಘಗಳ ಮೂಲಕ ಅನುಕೂಲ ಪಡೆದಿರುವ ರೈತರು ಸಂಘದ ಉಳಿವಿಗೆ ನೆರವಾಗಬೇಕು ಎಂದು ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಗುರುಪ್ರಸಾದ್ ಹೇಳಿದರು.


ಮಂಗಳವಾರ ತಾಲೂಕಿನ ವೀರನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ನಾನಾ ಕಾರಣದಿಂದ ಜೀವನೋಪಾಯಕ್ಕಾಗಿ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಹಾಲು ಒಕ್ಕೂಟದ ವತಿಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಡೇರಿಗಳನ್ನು ತೆರೆದು ಉತ್ಪಾದನೆಯಾದ ಹಾಲನ್ನು ಖರೀದಿಸಲಾಗುತ್ತಿದೆ. ಜತೆಗೆ ಜಾನುವಾರು ಆರೋಗ್ಯ ತಪಾಸಣೆ ಸೇರಿದಂತೆ ಹೈನುಗಾರಿಕೆಗೆ ಸಾಕಷ್ಟು ನೆರವು ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಡೇರಿ ನಿರ್ವಹಣೆ ಕಷ್ಟವಾಗುತ್ತಿದ್ದು ನಷ್ಟದಲ್ಲಿ ನಡೆಸಲಾಗುತ್ತಿದೆ.

ಆದ್ದರಿಂದ ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ಡೇರಿಗಳ ಉಳಿವಿಗೆ ನೆರವಾಗಬೇಕು ಎಂದು ಹೇಳಿದರು.ಉಪಾಧ್ಯಕ್ಷ ಅಂದಲೇಗೌಡ, ನಿರ್ದೇಶಕರಾದ ಜಿ.ಬಸವಣ್ಣ, ಗಣೇಶ, ಕುಮಾರ್, ಗುರುಮಲ್ಲಪ್ಪ, ಮುಖ್ಯ ಕಾರ್ಯನಿರ್ವಾಹಕ ನಂದೀಶ್ ಸೇರಿದಂತೆ ಹಲವರು ಇದ್ದರು.