ಅಂಕೋಲಾ: ಭತ್ತದ ತಳಿಗಳಲ್ಲಿ ಕಗ್ಗ ಭತ್ತ ಶ್ರೇಷ್ಠವಾಗಿದೆ. ಇಂತಹ ವಿಶಿಷ್ಟ ತಳಿಯ ಬಗೆಗೆ ನಿರ್ಲಕ್ಷ್ಯ ಬೇಡ. ಕಗ್ಗ ಭತ್ತದ ಅಕ್ಕಿ ಸೇವನೆಯು ಮನುಷ್ಯನ ಆರೋಗ್ಯಕ್ಕೂ ಒಳ್ಳೆಯದು ಹೀಗಾಗಿ ರೈತರು ಕಗ್ಗ ಭತ್ತದ ಕೃಷಿಯನ್ನು ಮುಂದುವರಿಸಬೇಕು ಎಂದು ಪರಿಸರ ವಿಜ್ಞಾನಿ ಡಾ. ಸುಭಾಶಚಂದ್ರನ್ ಹೇಳಿದರು.
ಪಟ್ಟಣದ ಕೇಣಿಯ ಸರ್ಕಾರಿ ಪ್ರೌಢಶಾಲೆ ಹಾಗೂ ಜಗದೀಶಚಂದ್ರ ಭೋಸ್ ಇಕೋ ಕ್ಲಬ್ ಸಹಯೋಗದ ಲ್ಲಿ ಕೇಣಿಯ ಕೃಷ್ಣ ವಿಠೋಬ ನಾಯ್ಕ ಜಮೀನಿನಲ್ಲಿ ಗುರುವಾರ ಹಮ್ಮಿಕೊಂಡ ಕಗ್ಗೋತ್ಸವ ಮತ್ತು ಕೃಷಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಗ್ಗ ಇಂದು ಕಣ್ಮರೆಯಾಗುತ್ತಿದೆ. ಕಗ್ಗದ ಜಾಗದಲ್ಲಿ ಸಿಗಡಿ ಕೃಷಿಗಳು ಬರುತ್ತಿವೆ. ಕಗ್ಗ ಭತ್ತದಲ್ಲಿ ಅನೇಕ ಜೈವಿಕ ಅಂಶಗಳಿವೆ. ಗಜನಿ ಭೂಮಿಗಳಲ್ಲಿ, ಉಪ್ಪಿನ ಅಂಶವಿರುವ ಗದ್ದೆಗಳಲ್ಲಿ ಈ ಭತ್ತವನ್ನು ಮೀನುಗಾರಿಕೆಯ ಜತೆಯಲ್ಲಿ ಬೆಳೆಯಲಾಗುತ್ತಿತ್ತು. ಕಗ್ಗ ಭತ್ತದ ಕೃಷಿಯಿಂದ ಭೂಮಿಯಲ್ಲಿ ಹೇರಳವಾಗಿ ಇಂಗಾಲದ ಶೇಖರಣೆಯು ಆಗುತ್ತದೆಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದರು.
ಸಿಟಿಇ ಬೆಳಗಾವಿ ನಿವೃತ್ತ ಪ್ರವಾಚಕ ನಾಗರಾಜ ನಾಯಕ ಮಾತನಾಡಿ, ಇತ್ತೀಚೆಗೆ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಒಂದು ವೇಳೆ ಅಕ್ಕಿಯ ಅಭಾವ ಎದುರಾದರೆ ಟೊಮ್ಯಾಟೋ ರೀತಿಯಲ್ಲಿ ಅಧಿಕ ಬೆಲೆಗೆ ಖರೀದಿಸಬೇಕಾಗಬಹುದು. ಶಾಲೆಗಳಲ್ಲೂ ಕೂಡ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ಕಲಿಸುವುದು ಹೆಚ್ಚು ಸೂಕ್ತ ಎಂದರು.
ಕುಮಟಾ ಡಯಟ್ ಪ್ರಾಚಾರ್ಯ ಎನ್.ಜಿ. ನಾಯಕ ಮಾತನಾಡಿದರು. ಬೆಳಗಾರ ಸಮಿತಿಯ ಅಧ್ಯಕ್ಷ ನಾಗರಾಜ ನಾಯಕ ಮಾತನಾಡಿ, ಭತ್ತಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವಿದೆ. ಆದರೆ, ಇಂದು ಸಾವಿರಾರು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿವೆ. ಇದು ಹೀಗೆಯೇ ಮುಂದುವರೆದರೆ ಅಕ್ಕಿಯ ಕೊರತೆ ಕಂಡು ಬರಲಿದೆ. 140 ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತಿದ್ದ ಏಕೈಕ ದೇಶ ಭಾರತ, ಮುಂದಾಲೋಚನೆಯಿಂದ ರಫ್ತನ್ನು ನಿಲ್ಲಿಸಿದೆ ಎಂದರು.
ಬಿಇಒ ಮಂಗಳಲಕ್ಷ್ಮೀ ಪಾಟೀಲ, ಆರ್ಎಫ್ಒ ಜಿ. ವಿನಾಯಕ, ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎನ್. ನಾಯಕ, ದಿನಕರ ವೇದಿಕೆಯ ಅಧ್ಯಕ್ಷ ರವೀಂದ್ರ ಕೇಣಿ, ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಮಾತನಾಡಿದರು.
ಪುರಸಭೆ ಸದಸ್ಯೆ ಶೀಲಾ ಶೆಟ್ಟಿ, ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ, ನಾಡವರ ಸಂಘದ ಅಧ್ಯಕ್ಷ ಆರ್.ಟಿ. ಮಿರಾಶಿ, ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಉರಗ ಸಂರಕ್ಷಕ ಮಹೇಶ ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ನಿವೃತ್ತ ಉಪನ್ಯಾಸಕ ವಸಂತ ನಾಯಕ, ವೆಂಟು ಮಾಸ್ತರ, ದೇವರಾಯ ನಾಯಕ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ಕೆ. ಬಂಟ, ಇದ್ದರು.
ಸನ್ಮಾನಿತರು: ಪದ್ಮಶ್ರೀ ಡಾ. ತುಳಸಿ ಗೌಡ, ಪರಿಸರ ವಿಜ್ಞಾನಿ ಡಾ. ಎಂ.ಡಿ. ಸುಭಾಷಚಂದ್ರನ್, ಕೃಷಿಕರಾದ ನಾಗರಾಜ ಮೋಹನ ನಾಯ್ಕ, ಬೀದಿ ಗಾಂವಕರ, ಬೆಳ್ಯ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.