ಹುಣಸೂರು ತಾಲೂಕು ಹರೀನಹಳ್ಳಿಯಲ್ಲಿ ಆಯೋಜಿಸಿದ್ದ ಜೈವಿಕ ಇಂಗಾಲದ ಬಳಕೆ ಕುರಿತಾದ ಪ್ರಾತ್ಯಕ್ಷಿಕೆಯಲ್ಲಿ ರೈತರಿಗೆ ಜೈವಿಕ ಇಂಗಾಲದ ಉತ್ಪಾದನೆ ಮತ್ತು ಬಳಕೆ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿ ಕ್ಷಿತಿಜ್ ಅರಸ್, ಶೇಕ್ ರಿಜ್ವಾನ್, ನಂಜುಂಡಸ್ವಾಮಿ ಇತರರು ಇದ್ದರು.  
ಜಿಲ್ಲೆ

ಭೂಮಿ ಬರಡಾಗದಂತೆ ರೈತರು ಎಚ್ಚರ ವಹಿಸಲಿ

ಹುಣಸೂರು: ಜೈವಿಕ ಇದ್ದಲನ್ನು ಭೂಮಿಯಲ್ಲಿ ಸೇರಿಸುವುದರಿಂದ ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಹೆಚ್ಚಾಗುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಲಿದ್ದು, ಭೂಮಿ ಬರಡಾಗದಂತೆ ರೈತರು ಎಚ್ಚವಹಿಸಬೇಕೆಂದು ಐಬಿಬಿಎನ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಕ್ಷಿತಿಜ್ ಅರಸ್ ಹೇಳಿದರು.


ತಾಲೂಕಿನ ಹರೀನಹಳ್ಳಿ ಗ್ರಾಮದಲ್ಲಿ ಐಟಿಸಿ/ಎಂಎಸ್‌ಕೆ, ಔಟ್‌ರೀಚ್ ಸಂಸ್ಥೆ ಹಾಗೂ ಐ.ಬಿ.ಬಿ.ಎನ್(ಇಂಡಿಯನ್ ಬಯೋಚಾರ್ ಆ್ಯಂಡ್ ಬಯೋರಿಸೋರ್ಸಸ್ ನೆಟ್‌ವರ್ಕ್) ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜೈವಿಕ ಇಂಗಾಲದ ಬಳಕೆ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಗದ್ದೆ, ಹೊಲಗಳಲ್ಲಿ ದೊರೆಯುವ ಕೃಷಿ ತ್ಯಾಜ್ಯ ವಸ್ತುಗಳನ್ನು ಬೆಂಕಿಯಿಂದ ಸುಟ್ಟ ನಂತರ ಉಳಿವ ವಸ್ತುವೇ ಜೈವಿಕ ಇಂಗಾಲವಾಗಿದೆ. ಕಡಿಮೆ ಖರ್ಚಿನಲ್ಲಿ ರೈತರಿಗೆ ಉಪಯುಕ್ತ ಮತ್ತು ಮುಕ್ತವಾಗಿ ದೊರೆಯುವ ಕೃಷಿ ತ್ಯಾಜ್ಯ ವಸ್ತುಗಳಿಂದ ಜೈವಿಕ ಇಂಗಾಲ ತಯಾರಿಸಬಹುದು. ಜೈವಿಕ ಇದ್ದಲು ಭೂಮಿಗೆ ಇತರ ಪೋಷಕಾಂಶಗಳಾದ ಕ್ಯಾಲ್ಸಿಯಂ, ಪೋಟ್ಯಾಸಿಯಂ, ಮ್ಯಾಗ್ನೇಷಿಯಂ, ಸೋಡಿಯಂಗಳನ್ನು ಮಣ್ಣಿನಲ್ಲಿ ಸೇರಿಸುತ್ತದೆ. ಅಲ್ಲದೆ ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ನೀರನ್ನು ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದರು.


ಇದೇ ವೇಳೆ ಸಿದ್ಧಪಡಿಸಿದ ಜೈವಿಕ ಇದ್ದಿಲನ್ನು ರೈತರು ಎರಡು ಕೆ.ಜಿ.ಪ್ರಮಾಣದಲ್ಲಿ ತೆಗೆದುಕೊಂಡು 8 ಕೆ.ಜಿ.ತಿಪ್ಪೆ ಗೊಬ್ಬರದೊಂದಿಗೆ ಟ್ರೈಕೋಡರ್ಮಾ, ಪಿ.ಎಸ್.ಬಿ ಎಂಬ ಜೈವಿಕ ಶಿಲೀಂಧ್ರ ನಾಶಕಗಳೊಡನೆ ಮಿಶ್ರಣ ಮಾಡಿ ಭೂಮಿಯಲ್ಲಿ ಸೇರಿಸುವಂತೆ ತಿಳಿಸಲಾಯಿತು. ಅಲ್ಲದೆ ಪ್ರಾತ್ಯಕ್ಷಿಕೆ ಮೂಲಕ ಜೈವಿಕ ಇಂಗಾಲದ ತಯಾರಿ ಮತ್ತು ಬಳಕೆಯನ್ನು ವಿವರಿಸಲಾಯಿತು.


ಐಟಿಸಿ/ಎಂಎಸ್‌ಕೆ ಕಾರ್ಯನಿರ್ವಹಣಾಧಿಕಾರಿ ಶೇಕ್ ರಿಜ್ವಾನ್, ಔಟ್ ರೀಚ್ ಸಂಸ್ಥೆ ಯೋಜನಾಧಿಕಾರಿ ನಂಜುಂಡಸ್ವಾಮಿ, ಸಂಸ್ಥೆ ಸಿಬ್ಬಂದಿ ಪ್ರಕಾಶ, ರಂಗಸ್ವಾಮಿ, ಯಶವಂತ್, ಸಾಗರ್, ತರಬೇತಿ ಪಡೆದ ರೈತರಾದ ಪ್ರಭಾಕರ್ ಅರಾಧ್ಯ, ಕೆ.ಎಂ.ರಾಜು, ಚನ್ನವಿರಾಧ್ಯ, ಕೆ.ಪಿ.ರಾಘವೇಂದ್ರ, ಕುಮಾರನಾಯಕ, ಮಹೇಶ ಕುಮಾರ್, ಆನಂದ, ಮಂಜು ಮತ್ತು ಪ್ರಗತಿಪರ ರೈತರು ಇದ್ದರು.