ವಿಜಯಪುರ: ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿ ಜಿಲ್ಲಾಧ್ಯಕ್ಷ ಜಟ್ಟಪ್ಪ ಮಾದರ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠ ಪರಿಶಿಷ್ಟ ಜಾತಿ ಮೀಸಲಾತಿಯಡಿ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ ಎಂದು ತೀರ್ಪು ನೀಡಿದೆ. ಆ ಪ್ರಕಾರ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಸಂವಿಧಾನಿಕ ಹಕ್ಕು ಮತ್ತು ಸೌಲಭ್ಯಗಳನ್ನು ಮರೆ ಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದಿದೆ. ಆ ಮೂಲಕ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಗೊಂದಲ ಸೃಷ್ಠಿಸುತ್ತಿರುವುದು ಸಂವಿಧಾನಕ್ಕೆ ಮಾಡುವ ಅಪಚಾರ ಎಂದರು.
ಮುಖಂಡರಾದ ಹಣಮಂತ ಬಿರಾದಾರ, ತಿಪ್ಪಣ್ಣ ದೊಡ್ಡಮನಿ, ಸಾಯಿ ಕುಮಾರ ಬಿಸನಾಳ, ಪರಶುರಾವ ರೋಣಿಹಾಳ, ಸದಾನಂದ ಗುನ್ನಾಪುರ, ಪ್ರಶಾಂತ ದೊಡ್ಡಮನಿ ಮತ್ತಿತರರಿದ್ದರು.