ಜಿಲ್ಲೆ

ನಮ್ಮೊಳಗಿರುವ ದುಷ್ಟತನವೂ ಸಂಹಾರವಾಗಲಿ

ಬಸವರಾಜ ವೀರಪ್ಪ ಗರಗ

ಗುತ್ತಲ: ದುಷ್ಟತನ ಸಂಹಾರದ ಸಂಕೇತವಾಗಿರುವ ದಸರಾ ಕಾರ್ಯಕ್ರಮದಲ್ಲಿ ನವ ದುರ್ಗೆಯರ ಆರಾಧನೆಯಿಂದ ಸಮಾಜದಲ್ಲಿನ ದುಷ್ಟತನದೊಂದಿಗೆ ನಮ್ಮೊಳಗಿರುವ ದುಷ್ಟತನವೂ ಸಂಹಾರವಾಗಲಿ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುತ್ತಲ ದಸರಾ ಉತ್ಸವಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ದುಷ್ಟ ಶಕ್ತಿಗಳನ್ನು ಸಂಹರಿಸಿ ಶಿಷ್ಟರನ್ನು ಪರಿಪಾಲಿಸುವ ದೇವಿ ಆರಾಧನೆಯ ದಸರೆಯು ಹಿಂದುಗಳ ಪವಿತ್ರ ಹಬ್ಬವಾಗಿದೆ. ಶಕ್ತಿಯ ಆರಾಧನೆಯ ದಸರಾ ಒಂಬತ್ತು ದಿನಗಳ ಆಚರಣೆಯ ನಂತರ ವಿಜಯ ದಶಮಿ ಹಬ್ಬ ನಮ್ಮ ಸಂಸ್ಕೃತಿಯ ಹೆಮ್ಮೆಯ ಹಬ್ಬವಾಗಿದೆ ಎಂದರು.
ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಿಯ ಅಪರಾವತಾರದಂತೆ ಗುತ್ತಲದ ದಸರಾ ದೇವಿ ನಿರ್ವಿುಸಿರುವ ಶಿಲ್ಪಿ ಮಲ್ಲೇಶ ಬಡಿಗೇರ ಅವರ ಕಲಾವೈಖರಿಯನ್ನು ಪ್ರಶಂಸಿದರು.
ಕಲ್ಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿದರು.
ಉತ್ಸವ ಮೂರ್ತಿಯೊಂದಿಗೆ ಪ್ರತಿಷ್ಠಾಪನೆಯ ದುರ್ಗಾ ದೇವಿಯ ಭವ್ಯ ಮೆರವಣಿಗೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಎಲೆ ಪೇಟೆಯಲ್ಲಿನ ಚೌವತ ಕಟ್ಟಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ಪಿಎಸ್​ಐ ಬಸನಗೌಡ ಬಿರಾದಾರ ಶ್ರೀದುರ್ಗಾ ದೇವಿಗೆ ಪ್ರಥಮ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ದಸರಾ ಉತ್ಸವ ಸಮಿತಿ ಚನ್ನಪ್ಪ ಕಲಾಲ, ಉಪಾಧ್ಯಕ್ಷ ಶ್ರೀನಿವಾಸ ತೇಲ್ಕರ, ಖಜಾಂಚಿ ರಮೇಶ ಮಠದ, ದಸರಾ ಸಮಿತಿ ಸದಸ್ಯರು, ಪಪಂ ಸದಸ್ಯರು, ಮಾಜಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
ಗುತ್ತಲ ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ಪ್ರದೀಪ ಸಾಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಯ್ಯ ಪ್ರಸಾದಿಮಠ ಸ್ವಾಗತಿಸಿದರು. ಎಂ.ಬಿ. ಕೋಡಬಾಳ ಕಾರ್ಯಕ್ರಮ ನಿರ್ವಹಿಸಿದರು.