ನರಗುಂದ: ಗ್ರಾಮೀಣ ಪ್ರದೇಶದ ಕೆಲವೆಡೆ ಅಸ್ಪೃಶ್ಯತೆಯ ತ್ವೇಷಮಯ ವಾತಾವರಣ ಇಂದಿಗೂ ಆಚರಣೆಯಲ್ಲಿದೆ. ಈ ಅನಿಷ್ಟ ಪದ್ಧತಿ ನಿಮೂಲನೆಯಾಗಬೇಕಾದರೆ ಶಿಕ್ಷಣವನ್ನೇ ಸವೋತ್ತಮ ಶಕ್ತಿಯನ್ನಾಗಿಸಿಕೊಳ್ಳಬೇಕು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಐಟಿಐ ಕಾಲೇಜ್ ಬಳಿ 6.79 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಿರುವ ಡಾ. ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ನಿರ್ವಣಕ್ಕೆ 6 ಕೋಟಿ ರೂ. ಅನುದಾನ ನೀಡಿದ್ದರಿಂದ 4 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ವಣಗೊಂಡಿದೆ. ಸಂಕ್ರಾಂತಿ ಹಬ್ಬದ ಬಳಿಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಇನ್ನುಳಿದ 2 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯದ ಅವಶ್ಯಕ ಅಭಿವೃದ್ಧಿ ಕಾಮಗಾರಿ, ವಿವಿಧ ಪಿಠೋಪಕರಣ ಅಳವಡಿಕೆ, ಸೋಲಾರ್ ಸೌಲಭ್ಯ ಒದಗಿಸಿಕೊಡುತ್ತೇನೆ. ನರಗುಂದಕ್ಕೆ ಬೇಕಾದ ಬಾಲಕಿಯರ ಪ್ರತ್ಯೇಕ ವಸತಿ ನಿಲಯ ಮಂಜೂರಾತಿ ಮಾಡಿಸಿಕೊಂಡುವಂತೆ ಮುಖ್ಯಮಂತ್ರಿ, ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಮಾಡಿ ಮತ್ತೊಂದು ವಸತಿ ನಿಲಯದ ನಿರ್ವಣಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಹಿಂದುಳಿದ ವರ್ಗದವರು ಯಾವುದೇ ಕಾರಣಕ್ಕೂ ಶೈಕ್ಷಣಿಕವಾಗಿ ಹಿಂದುಳಿಯಬಾರದು. ಶಿಕ್ಷಣದ ಜತೆಗೆ ಶಿಸ್ತು, ಸಂಘಟನೆ ಮಾಡಿಕೊಳ್ಳಬೇಕು. ಡಾ.ಬಿ.ಆರ್. ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕನಸಿನಂತೆ ಅತ್ಯುನ್ನತ ಶೈಕ್ಷಣಿಕ ಗುರಿ ಹೊಂದಿರಬೇಕು. ಸರ್ಕಾರ ಎಸ್ಸಿ, ಎಸ್ಟಿ ಸಮಾಜಕ್ಕೆ ನೀಡುವ ಪ್ರತಿಯೊಂದು ಯೋಜನೆಗಳ ಸದುಪಯೋಗ ಪಡೆದುಕೊಂಡು ಸಮಾಜದ ಸತ್ಪ್ರಜೆಗಳಾಗಿ ಬದುಕಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ವಾಸು ಜೋಗಣ್ಣವರ ಮಾತನಾಡಿದರು. ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಉಪಾಧ್ಯಕ್ಷೆ ಕಾಶಮ್ಮ ಮಳಗಿ, ಸದಸ್ಯರಾದ ಭಾವನಾ ಪಾಟೀಲ, ಸುನೀಲ ಕುಷ್ಟಗಿ, ದೇವಣ್ಣ ಕಲಾಲ, ಚಂದ್ರಗೌಡ ಪಾಟೀಲ, ಪ್ರಶಾಂತ ಜೋಶಿ, ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಎಸ್.ಕೆ. ಇನಾಮದಾರ, ಎಂ.ಎಚ್. ತಿಮ್ಮನಗೌಡ್ರ, ಚಂಬಣ್ಣ ವಾಳದ, ಎಂ.ಐ. ಮೇಟಿ, ಡಾ.ಸಿ.ಕೆ. ರಾಚನಗೌಡ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಬಡಿಗೇರ, ಮೋಹನ ಚವರಡ್ಡಿ, ಆರ್.ಎ. ನದಾಫ್, ಚಂದ್ರು ದಂಡಿನ, ಆನಂದ ಅಡಿಕೆ, ಚಂದ್ರು, ವಿ.ಎಫ್. ಭೀಮಣ್ಣವರ, ಚಂದ್ರಶೇಖರ ಉಪಸ್ಥಿತರಿದ್ದರು. ಎಸ್.ಎಸ್. ಪೂಜಾರ ನಿರ್ವಹಿಸಿದರು.