ಪಾಂಡವಪುರ ತಾಲೂಕಿನ ಹರವು ಗ್ರಾಮದಲ್ಲಿ ಹಿರಿಯ ಸಹಕಾರಿ ಧುರೀಣ, ಮಾಜಿ ಶಾಸಕ ಬಿ.ವೈ.ನಿಲೇಗೌಡರ ಜನ್ಮ ದಿನ ಆಚರಿಸಲಾಯಿತು. ರಾಜೀವ್, ಎಚ್.ಕೆ.ವೆಂಕಟೇಶ್, ನಾಗಲಿಂಗೇಗೌಡ ಇತರರು ಇದ್ದರು.  
ಜಿಲ್ಲೆ

ಕೊಡುಗೆ ಕೊಟ್ಟವರ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿರಲಿ

ಪಾಂಡವಪುರ: ಸಮಾಜಕ್ಕೆ ಕೊಡುಗೆ ಕೊಟ್ಟು ಮರೆಯಾದ ಜೀವಗಳು ಜೀವಂತವಾಗಿರಬೇಕು ಎಂದರೆ ಅವರ ಹೆಸರಿನಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ನಡೆಯುತ್ತಿರಬೇಕು ಎಂದು ಗ್ರಾಮರಂಗ ಸಾಂಸ್ಕೃತಿಕೆ ವೇದಿಕೆ ಅಧ್ಯಕ್ಷ ನಾಗಲಿಂಗೇಗೌಡ ತಿಳಿಸಿದರು.

ತಾಲೂಕಿನ ಹರವು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಹಕಾರಿ ಧುರೀಣ, ಪಿಎಸ್‌ಎಸ್‌ಕೆ ಕಾರ್ಖಾನೆ ನಿರ್ಮಾತೃ, ಮಾಜಿ ಶಾಸಕ ಬಿ.ವೈ.ನಿಲೇಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸುವ ಮೂಲಕ ರೈತರು ಸದಾ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದರು. ಬಿ.ವೈ.ನಿಲೇಗೌಡರು ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವ ಜತೆಗೆ ಕಬ್ಬು ಬೆಳೆಯುವ ರೈತ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲಿ ಎಂದು ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಸ್ಥಾಪಿಸಿದರು. ಇಂತಹ ಮಹಾನ್ ವ್ಯಕ್ತಿಗಳನ್ನು ಜನ ಮರೆಯುವುದಿಲ್ಲ, ಮರೆಯಲು ಬಾರದು ಎಂದರು.

ಜಿಲ್ಲೆಯಲ್ಲಿ ಹಲವಾರು ಸಹಕಾರಿ ಧುರೀಣರಿದ್ದಾರೆ. ಆದರೆ ನಿಲೇಗೌಡರು ಪಾಂಡವಪುರ ಕ್ಷೇತ್ರದ ಮೊದಲ ಶಾಸಕರಾಗಿ ಸಹಕಾರ ಕ್ಷೇತ್ರದ ಮೂಲಕ ತಾಲೂಕಿಗೆ ಅಪಾರ ಕೊಡುಗೆ ನೀಡಿ ಹೋಗಿದ್ದಾರೆ. ಮಕ್ಕಳು ಇಂತಹ ಮಹನೀಯರನ್ನು ಆದರ್ಶವಾಗಿಟ್ಟುಕೊಂಡು ಎಲ್ಲ ರಂಗದಲ್ಲೂ ಸಾಧನೆ ಮಾಡಬೇಕು ಎಂದು ಹೇಳಿದರು.

ಇಂಜಿನಿಯರ್ ರಾಜೀವ್, ಎಚ್.ಕೆ.ವೆಂಕಟೇಶ್, ಎಚ್.ಸಿ.ಪುನೀತ್ ರಾಜ್, ಬಿ.ವಿ.ಕಿಶೋರ್, ಎಚ್.ವಿ.ಗೋವಿಂದರಾಜು, ಆರ್.ಮಧುಸೂದನ್, ರೇಣುಕಮ್ಮ, ಅರುಣ, ಜ್ಯೋತಿ, ಎಸ್.ಆರ್.ಶೃತಿ, ಎಚ್.ಎನ್.ನಿಂಗರಾಜು, ಎಚ್.ವಿ.ನವೀನ್‌ಕುಮಾರ್ ಇತರರು ಇದ್ದರು.