ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವಾಮಿ ನಾದಬ್ರಹ್ಮಾನಂದ ಸ್ವಾಮಿಗಳ ಜಯಂತ್ಯುತ್ಸವ ಆಚರಿಸಲಾಯಿತು. ಶಾಂತಲಿಂಗ ಶ್ರೀಗಳು, ಪ್ರೊ.ಆರ್.ಬಿ. ಚಿನಿವಾಲರ, ಚೆನ್ನಬಸಪ್ಪ ಕಂಠಿ, ಬಿ.ಸಿ. ಹನುಮಂತಗೌಡ್ರ, ಶಿವಪ್ಪ ಬೋಳಶೆಟ್ಟಿ, ಬಿ.ಎಂ. ಗೊಜನೂರ, ಆರ್.ಕೆ. ಐನಾಪೂರ, ನೀಲಕಂಠ ಮಡಿವಾಳರ ಮತ್ತಿತರರಿದ್ದಾರೆ. 
ಜಿಲ್ಲೆ

ಕನ್ನಡ ಉಳಿಸುವ ಕಾರ್ಯವಾಗಲಿ

ಕುಳಗೇರಿ ಕ್ರಾಸ್:  ನಾದದ ಮೂಲಕ ನಾಣ್ಯವನ್ನು ನರ್ತಿಸುವಂತೆ ಮಾಡಿದ ಸ್ವಾಮಿ ನಾದಬ್ರಹ್ಮಾನಂದರು ಅವರು ಕರ್ನಾಟಕ ಸಂಗೀತ ಪರಂಪರೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ, ಸಂಗೀತಕ್ಕೆ ಸಾವನ್ನು ಗೆಲ್ಲುವ ಶಕ್ತಿ ಇದೆ ಎಂದು ಸಾಬೀತುಪಡಿಸಿದ್ದರು ಎಂದು ಭೈರನಹಟ್ಟಿ-ಶಿರೋಳ ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು ಹೇಳಿದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸ್ವಾಮಿ ನಾದಬ್ರಹ್ಮಾನಂದ ಸ್ವಾಮಿಗಳ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವನ್ನು ಹುಡುಕುವ ಸಂದರ್ಭ ಬಂದೊದಗಿದೆ. ಇದು ನಿಜಕ್ಕೂ ಕಳವಳದ ಸಂಗತಿ, ಕರ್ನಾಟಕ ಪ್ರತಿಯೊಬ್ಬ ಕನ್ನಡಿಗರ ಆಸ್ತಿ, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಭಾಷೆ ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಮೂಡಬೇಕು. ಯುವ ಹಾಗೂ ಹಿರಿಯ ಕವಿಗಳ ಕನ್ನಡ ಪುಸ್ತಕಗಳನ್ನು ಓದುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಕನ್ನಡವನ್ನು ಬೆಳೆಸುವಲ್ಲಿ ಎಲ್ಲರು ಶ್ರಮಿಸಬೇಕು ಎಂದರು.

ಪ್ರೊ.ಆರ್.ಬಿ. ಚಿನಿವಾಲರ ಮಾತನಾಡಿ, ಇಂದಿನ ಮಕ್ಕಳಲ್ಲಿ ಕನ್ನಡ ಪುಸ್ತಕ ಓದುವ ಹವ್ಯಾಸ ತುಂಬಾ ವಿರಳವಾಗಿದೆ. ನಾವು ಮಕ್ಕಳಿಗೆ ಕನ್ನಡ ನಾಡು-ನುಡಿಯ ನೈಜ ಇತಿಹಾಸವನ್ನು ತಿಳಿಸಿಕೊಡಬೇಕಿದೆ. ಶ್ರೀಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಮಾಡುತ್ತಿರುವ ಕನ್ನಡಾಂಭೆಯ ಕೈಂಕರ್ಯ ಶ್ಲಾಘನೀಯ ಎಂದರು.

ಚೆನ್ನಬಸಪ್ಪ ಕಂಠಿ, ಬಿ.ಸಿ. ಹನುಮಂತಗೌಡ್ರ, ಶಿವಪ್ಪ ಬೋಳಶೆಟ್ಟಿ, ಬಿ.ಎಂ. ಗೊಜನೂರ, ಆರ್.ಕೆ. ಐನಾಪೂರ, ನೀಲಕಂಠ ಮಡಿವಾಳರ, ಪ್ರದೀಪ, ಲಿಂಗರಾಜ ಮೊರಬದ, ಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಮತ್ತಿತರರಿದ್ದರು.