ದೇವದುರ್ಗ: ವಿವಿಧ ಇಲಾಖೆ ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರು ವೇತನ ತಾರತಮ್ಯ ಎದುರಿಸುತ್ತಿದ್ದಾರೆ. ಸರ್ಕಾರ ಈ ತಾರತಮ್ಯ ಧೋರಣೆ ಸರಿಪಡಿಸಬೇಕು ಎಂದು ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಹನುಮೇಗೌಡ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕೂಲಿಕಾರರ ಸಂಘಟನೆ ಸಂಯೋಜಿತ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಭಾನುವಾರ ಮಾತನಾಡಿದರು.
ಸರ್ಕಾರ ದಿನಕ್ಕೊಂದು ನಿಯಮ ಮತ್ತು ತೀರ್ಮಾನ ತೆಗೆದುಕೊಂಡು ಹೊರ ಗುತ್ತಿಗೆ ನೌಕರರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರನ್ನು ಕೆಲಸದಿಂದ ತೆಗೆದು ಹಾಕುವ ಮೂಲಕ ಹಿಂಸೆ ನೀಡುವುದನ್ನು ಸರ್ಕಾರ ಬಿಡಬೇಕು. ಹೊರಗುತ್ತಿಗೆ ನೌಕರರು ಹಲವು ಸಮಸ್ಯೆ ಎದುರಿಸುತ್ತಿದ್ದು ಮೇಲಧಿಕಾರಿಗಳ ಕಿರಿಕಿರಿ ಹೆಚ್ಚಾಗಿದೆ.
ಹಲವರು ಕಡಿಮೆ ವೇತನದಲ್ಲಿ ದುಡಿದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ ಸರ್ಕಾರ ನೌಕರರ ಬೇಡಿಕೆ ಈಡೇರಿಸದೆ ಮೊಂಡುತನ ಪ್ರದರ್ಶನ ಮಾಡುತ್ತಿದೆ. ನೌಕರರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು.