ಮೈಸೂರು; ಸಹಕಾರ ಸಂಘಗಳ ಚುನಾವಣೆ ಸೌಹಾರ್ದಯುತವಾಗಿ ನಡೆಯಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಬಿ.ಎನ್.ಸದಾನಂದ ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಸಹಕಾರ ಭವನದಲ್ಲಿ ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕಿನ ಸಹಕಾರ ಸಂಘಗಳ ಸಿಇಒಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಸಹಕಾರ ಸಂಘಗಳ ಚುನಾವಣೆಗಳು ಸೌಹಾರ್ದಯುತವಾಗಿ ಜರುಗುತ್ತಿದ್ದವು. ಅವಿರೋಧ ಆಯ್ಕೆಗೆ ಬಹಳಷ್ಟು ಸಹಕಾರ ಸಂಘಗಳು ಸಾಕ್ಷಿಯಾಗುತ್ತಿದ್ದವು. ಆದರೀಗ ಚುನಾವಣೆಯ ರೀತಿ ಸಂಪೂರ್ಣ ಬದಲಾಗಿದೆ. ಸಾಮಾನ್ಯ ಚುನಾವಣೆಯಂತೆ ಹಣ-ಹೆಂಡಕ್ಕೆ ಆದ್ಯತೆ ದೊರೆಯುತ್ತಿದೆ. ಹೀಗಾದರೆ, ಸಹಕಾರ ಕ್ಷೇತ್ರದಲ್ಲಿ ಸೇವಾ ಮನೋಭಾವ ಉಳಿಯುತ್ತದೆಯೇ? ಎಂದು ಕಳವಳ ವ್ಯಕ್ತಪಡಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಸಹಕಾರ ಸಂಘಗಳ ಚುನಾವಣೆ ನಡೆಯಬೇಕು. ಇದರಲ್ಲಿ ವ್ಯತ್ಯಾಸವಾದರೆ ಸಂಘದ ಸಿಇಒಗಳು ಬೆಲೆ ತೆರಬೇಕಾಗುತ್ತದೆ. ಸರ್ಕಾರದ ಮಾರ್ಗಸೂಚಿಯನ್ನು ಅಧ್ಯಯನ ಮಾಡಬೇಕು. ನಿಯಮಾವಳಿ ಪ್ರಕಾರವೇ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಚುನಾವಣೆ ಕುರಿತು ಆಡಳಿತ ಮಂಡಳಿಯವರು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಆದರೀಗ ಸಾಧ್ಯವಾಗುತ್ತಿಲ್ಲ. ನಿಯಮಗಳು ಕಠಿಣವಾಗಿವೆ. ಮಾರ್ಗಸೂಚಿಯನ್ನು ಬಿಟ್ಟು ಚುನಾವಣೆ ನಡೆಸಿದಲ್ಲಿ ಅದರ ಸಂಪೂರ್ಣ ಹೊಣೆಯನ್ನು ಸಿಇಒ ಹೊರಬೇಕಾಗುತ್ತದೆ ಎಂದರು.
ಚುನಾವಣೆ ನಡೆಯುವ ಸಂದರ್ಭದಲ್ಲಿ ಕಾನೂನಿನ ಅಂಶಗಳಿಗೆ ಮಾತ್ರ ಆದ್ಯತೆ ನೀಡಬೇಕು. ರಾಜಕಾರಣಿಗಳು, ಸದಸ್ಯರ ಒತ್ತಡಕ್ಕೆ ಮಣಿದು ನಿಯಮವನ್ನು ಉಲ್ಲಂಘನೆ ಮಾಡಬಾರದು. ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ರಾಜಕಾರಣಿಗಳು ಅಲ್ಲ. ಆದ್ದರಿಂದ ಎಚ್ಚರಿಕೆಯಿಂದ ಕಾನೂನಿನ ಅಡಿ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.
ಒಕ್ಕೂಟದ ನಿರ್ದೇಶಕರಾದ ಈರೇಗೌಡ, ಟಿ.ರಾಮೇಗೌಡ, ವೈ.ಭೈರಪ್ಪ, ಎಚ್.ಎಸ್.ಪ್ರಶಾಂತ್ ತಾತಾಚಾರ್, ಸಹಾಯಕ ನಿಬಂಧಕಿ ಅನಸೂಯಾ, ಒಕ್ಕೂಟದ ಸಿಇಒ ಡಾ.ಎಂ.ವಿಶ್ವೇಶ್ವರಯ್ಯ, ಕೆಐಸಿಎಂ ಪ್ರಾಂಶುಪಾಲ ಚಂದ್ರಶೇಖರ್, ಕಾರ್ಯಕ್ರಮ ಸಂಚಾಲಕ ಪಿ.ಎಸ್.ಹರೀಶ್ ಇನ್ನಿತರರಿದ್ದರು.