ಕೆ.ಆರ್.ನಗರ: ವಿಕಲಚೇತನರಿಗೆ ಅನುಕಂಪ ತೋರಿಸುವ ಬದಲು ಅವರ ಬಗ್ಗೆ ಕಾಳಜಿ ವಹಿಸಿ, ಸಮರ್ಪಕ ಅವಕಾಶಗಳನ್ನು ನೀಡುವ ಕೆಲಸ ಎಲ್ಲರಿಂದ ಆಗಬೇಕಿದೆ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ಹೇಳಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ 2024-25ನೇ ಸಾಲಿನ ವಿಕಲಚೇತನ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಲವು ದಶಕಗಳ ಹಿಂದೆ ವಿಕಲಚೇತನರ ಬಗ್ಗೆ ಯಾವುದೆ ಕಾಳಜಿ ಇರಲಿಲ್ಲ. ಒಂದಷ್ಟು ಅನುಕಂಪ ತೋರಿಸಿ ಅವರನ್ನು ಕಡೆಗಣಿಸಲಾಗುತ್ತಿತ್ತು. ಆದರೆ ಪ್ರಸ್ತುತ ಸ್ಥಿತಿ ಬದಲಾಗಿದೆ. ಅವರಿಗಾಗಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಕಲಚೇತನರನ್ನು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಯೋಜನೆಗಳನ್ನು ರೂಪಿಸಿದೆ. ಪಾಲಕರು ಮುತುವರ್ಜಿ ವಹಿಸಿ ಇದರ ಸದುಪಯೋಗ ಪಡೆದುಕೊಂಡು ವಿಶೇಷಚೇತನ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿಸುವಲ್ಲಿ ನೆರವಾಗಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, ಇಂದಿನ ಕಾರ್ಯಕ್ರಮದಲ್ಲಿ ವಿಕಲಚೇತನರ ತಪಾಸಣೆ ನಡೆಸಿ ಮಾಲ್ಯಾಂಕನ ಮಾಡಿ ಅವರಿಗೆ ಸಾಧನ ಸಲಕರಣೆ ನೀಡಲಾಗುತ್ತಿದೆ. ಇಂತಹ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದು ಹೇಳಿದರು.
ಬಿಆರ್‌ಸಿ ವೆಂಕಟೇಶ್ ಮಾತನಾಡಿ, ವಿಕಲಚೇತನ ಮಕ್ಕಳು ಸಮಾಜಕ್ಕೆ ಭಾರ ಎಂಬುದನ್ನು ಮರೆತು ಪಾಲಕರು ಅವರನ್ನು ಪೋಷಣೆ ಮಾಡಿ ಉತ್ತಮ ಅವಕಾಶ ನೀಡಿದಲ್ಲಿ ಎಲ್ಲರಿಗೂ ಅವರೇ ಆಶ್ರಯವಾಗುತ್ತಾರೆ ಎಂದರು.
ಸಿಡಿಪಿಒ ಅಣ್ಣಯ್ಯ, ತಾಲೂಕು ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಕಾಟ್ನಾಳ್ ಎಲ್.ಹೇಮಂತ್‌ಕುಮಾರ್, ವಿಶೇಷಚೇತನ ಸಂಘದ ಅಧ್ಯಕ್ಷ ನಾರಾಯಣಶೆಟ್ಟಿ, ಗೌರವಾಧ್ಯಕ್ಷ ನಾಗರಾಜ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಶಂಕರೇಗೌಡ, ರಾಜಶೇಖರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸೈಯ್ಯದ್‌ರಿಜ್ವಾನ್, ಜಿಜಿಎಂಎಸ್ ಶಾಲೆ ಮುಖ್ಯಶಿಕ್ಷಕ ರಾಮಕೃಷ್ಣ, ಬಿಐಇಆರ್‌ಟಿಗಳಾದ ನಾಗರಾಜು, ಪ್ರೇಮಾ, ಸಿಆರ್‌ಪಿ ವಸಂತಕುಮಾರ್, ಉದಯಕುಮಾರ್, ವಿಶೇಷಚೇತನ ಮಕ್ಕಳು, ಪಾಲಕರು ಇದ್ದರು.
ಶಿಬಿರದಲ್ಲಿ ಪಾಲ್ಗೊಂಡ ವಿಕಲಚೇತನ ಮಕ್ಕಳನ್ನು ಮೂಳೆತಜ್ಞ ಡಾ.ಗೌತಮ್, ಕಿವಿ, ಮೂಗು, ಗಂಟಲು ತಜ್ಞ ಡಾ.ಮಾಧವ್ ಹಾಗೂ ಆರ್‌ಬಿಎಸ್‌ಕೆ ತಂಡದ ವೈದ್ಯಾಧಿಕಾರಿಗಳು, ಅಲಿಂಕೊ ತಂಡ, ಮೈಸೂರಿನ ಡಿಐಸಿ ವೈದ್ಯಾಧಿಕಾರಿಗಳ ತಂಡ ಮಕ್ಕಳನ್ನು ತಪಾಸಣೆ ನಡೆಸಿದರು.