ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಳಿಗೆಯನ್ನು ಬುಧವಾರ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿದರು. ಡಾ.ಪುಷ್ಪಾ ಅಮರ್‌ನಾಥ್, ಯುಕೇಶ್ ಕುಮಾರ್ ಹಾಗೂ ಇತರರು ಇದ್ದರು.  
ಜಿಲ್ಲೆ

ದಸರಾ ವಸ್ತು ಪ್ರದರ್ಶನ ವರ್ಷದ ಎಲ್ಲಾ ದಿನವೂ ಕಾರ್ಯನಿರ್ವಹಿಸಲಿ : ಸಚಿವ ಈಶ್ವರ ಬಿ. ಖಂಡ್ರೆ

ಮೈಸೂರು: ನಗರಕ್ಕೆ ವರ್ಷದ 365 ದಿನವೂ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನ ವರ್ಷದ ಎಲ್ಲ ದಿನವೂ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ ನೀಡಿದರು.

ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ದಸರಾ ಅಂಗವಾಗಿ 90 ದಿನಗಳ ಕಾಲ ವಸ್ತು ಪ್ರದರ್ಶನ ನಡೆದೇ ನಡೆಯುತ್ತದೆ. ಈ ಸಂದರ್ಭದಲ್ಲಿ ತಾತ್ಕಾಲಿಕ ಮಳಿಗೆ ಮಾಡುವ ಬದಲು ಶಾಶ್ವತ ಮಳಿಗೆ ಮಾಡಿದರೆ ವರ್ಷವಿಡೀ ನವ ನವೀನ ವಿಚಾರಗಳನ್ನು ಪ್ರದರ್ಶಿಸಲು ಅವಕಾಶ ಆಗುತ್ತದೆ ಎಂದು ಹೇಳಿದರು.

ಮೈಸೂರು ಪ್ರವಾಸಿಗರ ಸ್ವರ್ಗವಾಗಿದ್ದು. ದಸರಾ ಮಹೋತ್ಸವದ ಸಂದರ್ಭದಲ್ಲಿ ಅಷ್ಟೇ ಅಲ್ಲದೆ ವರ್ಷವಿಡೀ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಾರೆ. ಜತೆಗೆ ವಸ್ತು ಪ್ರದರ್ಶನ ಮೈದಾನ ಅರಮನೆಯ ಮುಂಭಾಗದಲ್ಲೇ ಇರುವ ಕಾರಣ ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದರು.

ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಹಾಗೂ ಇತರರು ಇದ್ದರು.