ವಿಜಯವಾಣಿ ಸುದ್ದಿಜಾಲ ಧಾರವಾಡ
ಕವಿಯಲ್ಲಿ ವಿಮರ್ಶಕನಿರಬೇಕು. ವಿಮರ್ಶಕನಲ್ಲಿ ಕವಿ ಮನೋಭಾವ ಇರಬೇಕು. ಕವಿ ಕೂಡ ವಿಮರ್ಶಕನೇ ಆಗಿರುತ್ತಾನೆ ಎಂದು ವಿಮರ್ಶಕ ಪ್ರೊ. ಸಿ.ಆರ್. ಯರವಿನತೆಲಿಮಠ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಶತಾಯುಷಿ ದಿ. ಸಂಗಮ್ಮ ಇಮ್ರಾಪುರ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ. ಸೋಮಶೇಖರ ಇಮ್ರಾಪುರ ಅವರ ಸಮಗ್ರ ಕಾವ್ಯ ಸಂಪುಟ ಬಿಸಿಲ ಹೂ ಬಿಡುಗಡೆಗೊಳಿಸಿ ಮಾತನಾಡಿದರು.
ಇಮ್ರಾಪುರ ಅವರಲ್ಲಿ ಬಾಲ್ಯದಲ್ಲೇ ಕಾವ್ಯ ರಚನಾ ಶಕ್ತಿ ತುಂಬಿತ್ತು. ಕಷ್ಟದ ಜೀವನ, ಬದುಕಿನ ಕಹಿ ಟನೆಗಳೇ ಕಾವ್ಯ ರಚನೆಗೆ ಪ್ರೇರಣೆ. ರಸ, ವಿರಸ, ಸರಸದ ಚಿತ್ರಣಗಳನ್ನು ಇಮ್ರಾಪುರ ಕಾವ್ಯಗಳಲ್ಲಿ ಕಾಣುತ್ತೇವೆ. ವ್ಯಕ್ತಿ ಚಿತ್ರದ ಕವನಗಳನ್ನು ಅವಲೋಕಿಸಿದಾಗ ಕಲ್ಲಿನಲ್ಲಿ ಕೆತ್ತಿದ ಪಾರದರ್ಶಕ ಮೂತಿರ್ಯಂತೆ ಕೆತ್ತಿಕೊಟ್ಟಿದ್ದಾರೆ. ಅವರ ಕಾವ್ಯದಲ್ಲಿ ನಾದ ಮಾಧುರ್ಯವಿದೆ. ಸಾಮಾಜಿಕ ಪ್ರಜ್ಞೆ ಇದೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಮಾತನಾಡಿ, ಇಮ್ರಾಪುರ ಸೀಮಾತೀತ ಕವಿ. ಆ ಬಾಲೆ ಕವನದಿಂದ ಆರಂಭವಾದ ಸಾಹಿತ್ಯ ಕೃಷಿ ಎಲ್ಲ ಪಂತಗಳ ಕ್ರಿಯೆ, ಪ್ರಕ್ರಿಯೆಗಳನ್ನು ದಾಟಿ ಬಂದಿರುವಂತಹದ್ದು. ಸಮನ್ವಯ ಕವಿ ಎಂಬ ಹೆಸರಿಗೆ ಪಾತ್ರರಾದವರು. ಆಧುನಿಕ ಸಂಗತಿಗಳು ಅವರ ಕಾವ್ಯದಲ್ಲಿ ಅಡಕವಾಗಿವೆ ಎಂದರು.
ಸಂದ ಉಪಾಧ್ಯೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸೋಮಶೇಖರ ಇಮ್ರಾಪುರ, ಪ್ರೊ. ಶಾಂತಾ ಇಮ್ರಾಪುರ, ನಿಂಗಣ್ಣ ಕುಂಟಿ, ಬಿ.ಎಸ್. ಶಿರೋಳ, ಮಧು ದೇಸಾಯಿ, ಜಿ.ಬಿ. ಹೊಂಬಳ, ವೀಣಾ ಸಂಕನಗೌಡರ, ಡಾ. ಆನಂದ ಪಾಟೀಲ, ಪ್ರೊ. ಮಹೇಶ ತಿಪಶೆಟ್ಟಿ, ಡಾ. ಆರ್.ಬಿ. ಬಸವರಡ್ಡಿ, ಸಿ.ಯು. ಬೆಳ್ಳಕ್ಕಿ, ಕೊಟಬಾಗಿ, ಡಾ. ನಿಜಲಿಂಗಪ್ಪ ಮಟ್ಟಿಹಾಳ, ಮಲ್ಲಿಕಾರ್ಜುನ ಹಿರೇಮಠ, ಮಹಾಂತೇಶ ನರೇಗಲ್, ಪಾರ್ವತಿ ಹಾಲಭಾವಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು.