ಮೈಸೂರು: ಎಲ್ಲ ಭಾಷೆಗಳೂ ಶ್ರೇಷ್ಠವೇ. ಆದರೂ ಮೊದಲು ನಮ್ಮ ಮಾತೃ ಭಾಷೆಗೆ ಆದ್ಯತೆ ನೀಡಬೇಕು ಎಂದು ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ತ ಹೇಳಿದರು.
ಶ್ರೀ ನಟರಾಜ ಪ್ರತಿಷ್ಠಾನದ ವತಿಯಿಂದ ಹೊಸಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಕ್ಕೆ ಎಂದಿಗೂ ಚ್ಯುತಿ ಬರುವುದಿಲ್ಲ. ಕೇವಲ ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದರೆ ಸಾಲದು. ಅದನ್ನು ಆಡಳಿತದಲ್ಲಿ ತರಬೇಕು, ಬಳಸಬೇಕು. ಆಗ ಮಾತ್ರ ಕನ್ನಡ ನಿತ್ಯವಾಗುತ್ತದೆ ಎಂದು ಹೇಳಿದರು.
ಕನ್ನಡ ಮಾಧ್ಯಮದಲ್ಲಿ ಕಲಿತವರು ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ. ಭಾರತರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನವಿರಬೇಕು. ಮನೆಯಲ್ಲಿ ದೀಪ ಬೆಳಗಿದರೆ ಆಗದು. ಪ್ರತಿಯೊಬ್ಬರ ಅಂತರಂಗದಲ್ಲೂ ಕನ್ನಡದ ದೀಪ ಬೆಳಗಬೇಕು. ಆಡಳಿತ ಕ್ಷೇತ್ರದಲ್ಲೂ ಅಧಿಕಾರಿಗಳಿಗೆ ತರಬೇತಿ ನೀಡಬೇಕು, ಸದ್ಯದ ಪರಿಸ್ಥಿತಿ ಆಂಗ್ಲ ಭಾಷೆಯಲ್ಲಿ ಓದಿ, ಬರೆದವರೇ ಶ್ರೇಷ್ಠರೂ ಎಂಬ ಪರಿಕಲ್ಪನೆ ಅಳಿಯಬೇಕು ಎಂದರು.
ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಕನ್ನಡ ರಾಜ್ಯೋತ್ಸವ ನವೆಂಬರ್‌ಗೆ ಮಾತ್ರ ಸೀಮಿತವಲ್ಲ. ಅದು ನಿತ್ಯೋತ್ಸವ. ನಾಡಿನ ಕಲೆ ಮತ್ತು ಸಂಸ್ಕೃತಿಯ ಅನಾವರಣವೇ ರಾಜ್ಯೋತ್ಸವ. ಈ ನಾಡಿನ ಮಹನೀಯರನ್ನು ಸ್ಮರಿಸಬೇಕು ಎಂದು ಹೇಳಿದರು.
ಇದೇ ವೇಳೆ ಅಂತರ ಪ್ರೌಢಶಾಲಾ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಶಾರದಾ, ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ ಇದ್ದರು.