*ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಸರ್ಕಾರಿ ಪಡಿತರ ವಿತರಕರ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಪ್ಪ ಆಗ್ರಹ
ಕನಕಪುರ
ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಇಕೆವೈಸಿ ಕಮಿಷನ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಜತೆಗೆ ಸಗಟು ಮಾರುಕಟ್ಟೆಯಲ್ಲಿನ ನ್ಯೂನತೆ ಸರಿಪಡಿಸಬೇಕೆಂದು ಸರ್ಕಾರಿ ಪಡಿತರ ವಿತರಕರ ರಾಜ್ಯ ಘಟಕದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯಾಧ್ಯಕ್ಷ ಟಿ.ಕೃಷ್ಣಪ್ಪ ಆಗ್ರಹಿಸಿದರು.
ನಗರದ ದೇಗುಲ ಮಠದ ನಿರ್ವಾಣೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕೋಟ್ಯಂತರ ರೂ. ಕಮಿಷನ್, ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆಯ ಇಕೆವೈಎಸ್ ಮಾಡಿರುವುದಕ್ಕೆ ನೀಡಬೇಕಿರುವ ಕಮಿಷನ್ ಹಣ ಬಾಕಿ ಉಳಿದಿದೆ. ನ್ಯಾಯಬೆಲೆ ಅಂಗಡಿಗಳನ್ನು ಸಹಕಾರ ಸಂಘಗಳಾಗಿ ಪರಿವರ್ತಿಸಬೇಕು, ಪ್ರತಿ ಕ್ವಿಂಟಾಲ್‌ಗೆ ನೀಡುತ್ತಿರುವ 150 ರೂ. ಕಮಿಷನ್ ಬದಲಾಗಿ 200 ರೂ.ಗೆ ಹೆಚ್ಚಿಸಬೇಕು ಎಂದರು.
ಸಗಟು ಮಾರುಕಟ್ಟೆಯಲ್ಲಿ ವಿದ್ಯುತ್ ಮಾಪನ ಯಂತ್ರ ಅಳವಡಿಕೆ, ಸಾಕಣೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆ, ಸಿಸಿ ಕ್ಯಾಮಾರಾ ಅಳವಡಿಕೆ ಮಾಡಬೇಕು ಎಂದರು.
ಇತ್ತೀಚೆಗೆ ಸಚಿವ ಕೆ.ಎಚ್ ಮುನಿಯಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಮ್ಮ ಬೇಡಿಕೆಗಳ ಮನವಿ ಸಲ್ಲಿಸಲಾಗಿದೆ, ಎಚ್.ಕೆ. ಮುನಿಯಪ್ಪ ಅವರು ಹಲವು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಆದರೆ, ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಕಿ ಇರುವ ಐದು ಕೋಟಿ ರೂ. ಬಿಡುಗಡೆಯಾಗಿಲ್ಲ ಎಂದರು.
65 ವರ್ಷ ವಯೋಮಿತಿ ದಾಟಿರುವ ಮಾಲೀಕರ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಪರವಾನಗಿ ರದ್ದುಪಡಿಸಬಾರದು, ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಮಿಕರಿಗೆ, ವೃದ್ಧರಿಗೆ, ಅಂಗವಿಕಲರು ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ, ಆದ ಕಾರಣ ಇಂತಹವರಿಗೆ ಒಪಿಡಿ ಪದ್ಧತಿ ಮುಂದುವರಿಸಬೇಕೆಂದು ಮನವಿ ಮಾಡಿದರು.
ತಾಲೂಕು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ದೇವರಾಜು ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಜತೆಗೆ ಹಲವು ವರ್ಷಗಳ ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ದೊರೆಯುತ್ತಿದ್ದ ಗೋಧಿ, ಸಕ್ಕರೆ, ಕಡಲೆ, ತೊಗರಿ ಬೇಳೆ, ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಮಾರಾಟ ಮಾಡಲು ಅನುಮತಿ ಕೊಡಿಸಬೇಕು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿರುವುದರಿಂದ ರಿಯಾಯಿತ ದರದಲ್ಲಿ ನಾವು ಮಾರಾಟ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.
ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.