ಜಿಲ್ಲೆ

ಸಿಎಂ ನಿವೇಶನಗಳನ್ನು ಮರಳಿಸಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಪಕ್ಷದ ಮುಖಂಡರಿಗೆ ಬಿಟ್ಟಿದ್ದು. ಆದರೆ ಸಿದ್ದರಾಮಯ್ಯಗೆ ನೈತಿಕತೆ ಇದ್ದರೆ ಕೂಡಲೇ ಮುಡಾ ನಿವೇಶನಗಳನ್ನು ಮರಳಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್​.ಆರ್​. ಹಿರೇಮಠ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಜೀವನ ನಿಷ್ಕಳಂಕವಾಗಿದೆ ಎನ್ನುವ ಸಿದ್ದರಾಮಯ್ಯ, ಬಿಜೆಪಿ ನಾಯಕರ ಬಗ್ಗೆ ಆರೋಪ ಮಾಡುವ ಬದಲು ನಿವೇಶನಗಳನ್ನು ಮರಳಿಸುವುದು ಸೂಕ್ತ ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಸಾಧ್ಯ ಎಂದು ಜನರಲ್ಲಿ ಕ್ಷಮೆಯಾಚಿಸಿ ಬಂದ್​ ಮಾಡಲಿ. ಅದನ್ನು ಬಿಟ್ಟು ಅನುದಾನಕ್ಕೆ ಎಸ್​ಸಿ, ಎಸ್​ಟಿ ಜನರಿಗೆ ಮೀಸಲಿಟ್ಟ ಹಣ ಬಳಕೆ ಸರಿಯಲ್ಲ. ಗಣಿ ಭ್ರಷ್ಟಾಚಾರದಲ್ಲಿ ತೊಡಗಿರುವ ಶಾಸಕ ನಾಗೇಂದ್ರ ಅವರನ್ನು ವಾಲ್ಮೀಕಿ ನಿಗಮ ಹಗರಣದ ವಿಚಾರಣೆಯಿಂದ ಎಸ್​ಐಟಿ ಕೈ ಬಿಟ್ಟಿದೆ. ಸಚಿವರ ಗಮನಕ್ಕೆ ಬಾರದೆ ಅವ್ಯವಹಾರ ನಡೆಯಲು ಸಾಧ್ಯವೇ ಇಲ್ಲ ಎಂದರು.
ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯ ರವಿಕೃಷ್ಣ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಹಾಗೂ ಕಾಂಗ್ರೆಸ್​ ಪಕ್ಷಗಳು ಒಪ್ಪಂದ ರಾಜಕಾರಣ ನಡೆಸಿವೆ. ನಮ್ಮ ಹಗರಣ ನೀವು ಕೇಳಬೇಡಿ, ನಿಮ್ಮ ಹಗರಣ ನಾವು ಕೇಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿವೆ ಎಂದರು.
ದಾಖಲೆಗಳು ಮಾತಾಡುತ್ತಿವೆ ಬಿಡುಗಡೆ: ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಬಂಧುಗಳಾದ ಡಿ.ಸಿ. ತಮ್ಮಣ್ಣ, ಡಿ.ಸಿ. ನಂಜುಂಡ್ಪ, ಸಂಸದ ಡಾ. ಸಿ.ಎನ್​. ಮಂಜುನಾಥ ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಅಕ್ರಮವಾಗಿ ಭೂಮಿ ಖರೀದಿಸಿದ ಕುರಿತು ದಾಖಲೆಗಳು ಮಾತಾಡುತ್ತಿವೆ ಕಿರುಹೊತ್ತಿಗೆ ಲೋಕಾರ್ಪಣೆ ಮಾಡಲಾಗಿದೆ. ತಾಲೂಕು ಕಚೇರಿಯಲ್ಲಿ ಅಕ್ರಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಲಾಗಿದೆ. ಗೋಮಾಳ ಜಮೀನನ್ನು ಕಾನೂನುಬಾಹಿರವಾಗಿ ಖರೀದಿಸಿದ ಕುರಿತು ತನಿಖೆ ನಡೆಸಲು ಆಗ್ರಹಿಸಲಾಗುವುದು ಎಂದು ಎಸ್​.ಆರ್​. ಹಿರೇಮಠ ತಿಳಿಸಿದರು.