ಜಿಲ್ಲೆ

ತಮ್ಮನ್ನು ಬೆಳೆಸಿದ ಕ್ಷೇತ್ರವನ್ನು ಸಿಎಂ ಅಭಿವೃದ್ಧಿ ಮಾಡಲಿ

ಅವಿನಾಶ್ ಜೈನಹಳ್ಳಿ

ಮೈಸೂರು: ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

2013ರಿಂದ 2018 ರವರೆಗೆ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಲಿಲ್ಲ.ಈಗಲೂ ಸ್ಪಂದಿಸಿಲ್ಲ. ಸಹಕಾರ ನೀಡುತ್ತಿಲ್ಲ. ಈ ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿ ಆಗಿ ಕೆಲಸ ವಾಡಿದ್ದರೂ ಮೂಲ ಸೌಕರ್ಯ ನೀಡದಿರಲು ಯಾರು ಕಾರಣ ಎಂದು ಪ್ರಶ್ನಿಸಿದರು.

ಡಿ.ಸಾಲುಂಡಿ ಘಟನೆಗೆ ಶಾಸಕ ಜಿ.ಟಿ.ದೇವೇಗೌಡರು ಕಾರಣವೆಂದು ಮುಡಾ ಅಧ್ಯಕ್ಷ ಕೆ.ಮರಿಗೌಡರು ಹೇಳಿದ್ದಾರೆ. ಜಿ.ಟಿ.ದೇವೇಗೌಡರು ಏನಾದರೂ ಗುಂಡಿ ತೋಡಬೇಕಿತ್ತೆ? ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಮುಡಾ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.

2006 ರಲ್ಲಿ ಮುಖ್ಯಮಂತ್ರಿ ಅಗಿದ್ದಾಗ ಜೆ ನರ್ಮ್ ಯೋಜನೆ ಬಗ್ಗೆ ತೀರ್ಮಾನ ಮಾಡಿದ್ದರಿಂದ ಎರಡು ಸಾವಿರ ಕೋಟಿ ರೂ.ಅನುದಾನ ಮೈಸೂರಿಗೆ ಬಂದಿತು. ಮೈಸೂರು ನಗರಕ್ಕೆ ಮೂರು ಬಾರಿ ಸ್ವಚ್ಛ ನಗರಿ ಪಟ್ಟ ಬರಲು ನಮ್ಮದು ಕಾಣಿಕೆ ಇದೆ ಎನ್ನುವುದನ್ನು ಮರೆಯಬಾರದು. 2018ರಲ್ಲಿ ಸಿಎಂ ಆಗಿದ್ದಾಗ ಹಳೆ ಉಂಡುವಾಡಿ ಯೋಜನೆಗೆ ಒಪ್ಪಿಗೆ ನೀಡಿ 540 ಕೋಟಿ ರೂಪಾಯಿಗೆ ಮಂಜೂರಾತಿ ನೀಡಲಾಯಿತು. ಮುಖ್ಯಮಂತ್ರಿಗಳು ಮೊದಲು ತಮ್ಮನ್ನು ಬೆಳೆಸಿದ ಹಳ್ಳಿಗಳ ಅಭಿವೃದ್ಧಿಗೆ ಗಮನಹರಿಸಲಿ ಎಂದು ತಿಳಿಸಿದರು.