ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ದೇಶ ಜಗತ್ತಿನಲ್ಲೇ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದ್ದು, ಇಲ್ಲಿ ಪ್ರಜೆಗಳೆ ಪ್ರಭುಗಳು. ವಿದ್ಯಾರ್ಥಿಗಳು ನಮ್ಮ ದೇಶದ ಸಂವಿಧಾನವನ್ನು ಓದುವುದರ ಜತೆಗೆ ಮೂಲಭೂತ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಹೇಳಿದರು.
ನಗರದ ಕರ್ನಾಟಕ ಹೈ ಸ್ಕೂಲಿನಲ್ಲಿ ಇತ್ತೀಚೆಗೆ ಶಾಲಾ ಸಂಸತ್ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಶಿಸ್ತು, ನಾಯಕತ್ವದ ಗುಣಗಳನ್ನು ಹೊಂದಿ, ಜೀವನದಲ್ಲಿ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದರು.
ಕೆ.ಇ.ಬೋರ್ಡ ಸಂಸ್ಥೆ ಅಭಿವೃದ್ಧಿ ಅಧಿಕಾರಿ ಗುರುರಾಜ ಜಮಖಂಡಿ ಮಾತನಾಡಿ, ಮಕ್ಕಳು ಪಠ್ಯವನ್ನು ಅಧ್ಯಯನ ಮಾಡುವುದರ ಜತೆಗೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೆ.ಇ. ಬೋರ್ಡ್ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿಗಳಾದ ಜಿ.ಆರ್.ಭಟ್, ವಿಶ್ವನಾಥ ದೇಶಪಾಂಡೆ, ಪ್ರಾಂಶುಪಾಲ ಎನ್.ಎನ್. ಸವಣೂರ , ಶೋಭಾದೇವಿ ಕೆ., ವಿ.ಬಿ. ಶಿಂಗೆ, ಪದ್ಮಾವತಿ ಅಂಗಡಿ, ಪ್ರಜ್ಞಾ ಗಲಗಲಲಿ, ಶಾಲಾ ಸಿಬ್ಬಂದಿ, ಇತರರು ಇದ್ದರು.