ಉಪ್ಪಿನಮೋಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಗುಂಬಳ್ಳಿ ಕ್ಲಸ್ಟರ್ ಹಂತ್ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು. ಕೆ. ಕಾಂತರಾಜು, ಎಂ.ವೀರಭದ್ರಸ್ವಾಮಿ, ರೇಚಣ್ಣ ಇದ್ದರು. 
ಜಿಲ್ಲೆ

ರೈತರ ಮಕ್ಕಳೂ ದೊಡ್ಡ ಹುದ್ದೆ ಅಲಂಕರಿಸುವಂತಾಗಲಿ

ಯಳಂದೂರು: ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆದು ದೊಡ್ಡ ಹುದ್ದೆ ಅಲಂಕರಿಸಿದಾಗ ಮಾತ್ರ ಶಿಕ್ಷಣ ಸಾರ್ಥಕತೆ ಕಂಡಂತಾಗುತ್ತದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ಉಪ್ಪಿನಮೂಳೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಗುಂಬಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ಪ್ರತಿಭಾವಂತರಾಗಿದ್ದಾಗ ಉತ್ತಮ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ತಾಲೂಕು ಉನ್ನತ ಸ್ಥಾನದಲ್ಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಮಗೆ ಎರಡನೇ ಸ್ಥಾನ ದೊರಕಿರುವುದೇ ಇದಕ್ಕೆ ಸಾಕ್ಷಿ ಎಂದು ಶಿಕ್ಷಕರನ್ನು ಶ್ಲಾಘಿಸಿದರು.

ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಅವರಿಗೆ ಆ ಕ್ಷೇತ್ರದಲ್ಲೇ ತರಬೇತಿ ನೀಡಬೇಕು. ಜತೆಗೆ ಸ್ವಾಭಿಮಾನದಿಂದ ಬದುಕು ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಡಬೇಕು. ಅವರನ್ನು ಕಲಿಕೆಯ ಕಡೆಗೆ ಹೆಚ್ಚು ವಾಲುವಂತೆ ಮಾಡಬೇಕು ಎಂದ ಅವರು, ಗ್ರಾಮದಲ್ಲಿನ ಸಮುದಾಯ ಭವನದ ಅಡುಗೆ ಕೋಣೆಗೆ ಅಗತ್ಯ ನೆರವು ನೀಡಲಾಗುವುದು ಎಂದರು.

ಇದೇ ವೇಳೆ ಶಾಲಾ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಜತೆಗೆ ಶಾಸಕರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೀನಾ, ಎಸ್‌ಡಿಎಂಸಿ ಅಧ್ಯಕ್ಷ ರುದ್ರಶಕ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕುಮಾರನಪುರ ಎಂ.ವೀರಭದ್ರ ಸ್ವಾಮಿ, ಸಿಆರ್‌ಪಿ ಯರಿಯೂರು ರೇಚಣ್ಣ, ನೌಕರರ ಸಂಘದ ಅಧ್ಯಕ್ಷ ವೈ.ಎಂ.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಗದ ಅಧ್ಯಕ್ಷ ಸೋಮಣ್ಣ, ಮಾದೇಶ್, ಶಿವಲಂಕಾರ್, ನಿರ್ಮಿತಿ ಕೇಂದ್ರದ ಜೆಇ ನಂದೀಶ್ ಇತರರು ಉಪಸ್ಥಿತರಿದ್ದರು.