ಜಿಲ್ಲೆ

ಮಕ್ಕಳಿಗೆ ಬಸವಣ್ಣನವರ ಇತಿಹಾಸ ತಿಳಿಸುವ ಕೆಲಸವಾಗಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ನಡೆ-ನುಡಿ, ಆದರ್ಶ ಜೀವನ ನಡೆಸುವುದನ್ನು ಕಲಿಸಿದವರು. ನಡೆ-ನುಡಿ ಒಂದೇ ಆಗಿರಬೇಕು. ಅಂತರ ಇರಬಾರದು ಎಂಬುದನ್ನು ತಿಳಿಸಿದ್ದಾರೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರ ಚಿಂತನೆ ಹಾಗೂ ಲಿಂಗಾಯತ ಭವನದ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಸಭಾಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರೆ ಸಾಲದು. ಅವರ ತತ್ವ, ಆದರ್ಶ, ಮೌಲ್ಯಗಳನ್ನು ಪಠ್ಯದಲ್ಲಿ ಅಳವಡಿಸುವ ಮೂಲಕ ಮಕ್ಕಳಿಗೆ ಬಸವಣ್ಣನವರ ಬಗ್ಗೆ ತಿಳಿಸಬೇಕು. ಅಂದಾಗಲೇ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದು ಸಾರ್ಥಕ ಎಂದರು.
ಸಚಿವ ಎಂ.ಬಿ. ಪಾಟೀಲ ಸಭಾಭವನ ಉದ್ಘಾಟಿಸಿ ಮಾತನಾಡಿ, ಲಿಂಗಾಯತ ಒಳಪಂಗಡಗಳು ಒಂದಾದರೆ ಮಾತ್ರ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ. ಒಳ ಪಂಗಡಗಳ ಮಧ್ಯೆ ನೆಂಟಸ್ಥಿಕೆ ಬೆಳೆಯಬೇಕು. ಇದೇ ಕಾರಣಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಆರಂಭಿಸಿದ್ದು, ಅದರ ಉದ್ದೇಶ ಈಡೇರಬೇಕು ಎಂದರು.
ಬಸವ ಧರ್ಮ ಜಾತಿ ರಹಿತ ಧರ್ಮವಾಗಿದ್ದು, ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕು. ಇದನ್ನು ವೀರಶೈವ ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಸಿದ್ಧರಾಮಯ್ಯ ಸರ್ಕಾರ ಆದೇಶಿಸಿತ್ತು. ಇದೀಗ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಮಹಾಸಭಾ ವತಿಯಿಂದ ವಸತಿ ನಿಲಯ ನಿರ್ಮಿಸಲು ಭೂಮಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.
ಶಾಸಕ ಎಂ.ಆರ್​.ಪಾಟೀಲ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಚಿತ್ತರಗಿಯ ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಪದಾಧಿಕಾರಿಗಳಾದ ಶಿವಶರಣ ಕಲಬಶೆಟ್ಟರ, ಎಸ್​.ಬಿ.ಗೋಲಪ್ಪನವರ, ಬಿ.ವೈ. ಪಾಟೀಲ, ಸಿದ್ದಣ್ಣ ಕಂಬಾರ, ಮಲ್ಲನಗೌಡ ಪಾಟೀಲ, ಶಿವಾನಂದ ಕವಳಿ, ಶಂಕರ ಕುಂಬಿ, ಸಂಧ್ಯಾ ಅಂಬಡಗಟ್ಟಿ, ಇತರರು ಇದ್ದರು.