ಮಹಾಲಿಂಗಪುರದ ಬಸವೇಶ್ವರ ವೃತ್ತದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ವೇಳಾಪಟ್ಟಿಯನ್ನು ದುಂಡಪ್ಪ ಬರಮನಿ ಪ್ರದರ್ಶಿಸಿದರು. ಪಂಡೀತ ಪೂಜೇರಿ, ಶ್ರೀಮಂತ ಒಂಟಗೋಡಿ ಇದ್ದರು. 
ಜಿಲ್ಲೆ

ಮಕ್ಕಳು ನಮ್ಮ ಸಂಸ್ಕೃತಿ, ಆಚಾರ ವಿಚಾರ ತಿಳಿದುಕೊಳ್ಳಲಿ

ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ಶ್ರೀಗುರು ಮಹಾಲಿಂಗೇಶ್ವರ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಿಂದ ಜ. 14 ರಂದು ‘ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದುಂಡಪ್ಪ ಬರಮನಿ ಹೇಳಿದರು.

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಭಾರತೀಯ ಪ್ರಾಚೀನ ಜೀವನ ಶೈಲಿಯ ಪರಂಪರೆ, ಗ್ರಾಮೀಣ ಸಂಪ್ರದಾಯ ನೆನಪಿಸಿಕೊಳ್ಳುವ ಸಂಕ್ರಾಂತಿ ಸಂಭ್ರಮ ನಡೆಯಲಿದೆ. ಎತ್ತಿನ ಬಂಡಿ ಮೆರವಣಿಗೆಯೊಂದಿಗೆ ಕಾಲೇಜು ವಿದ್ಯಾರ್ಥಿಗಳಿಂದ ಡೊಳ್ಳು ಕುಣಿತ, ಕೋಲಾಟ, ಝಾಂಜ್ ಕಲಾಮೇಳ, ಲೇಜಿಂ, ಗೊಂಬೆ ಕುಣಿತ ಮತ್ತು ಊರಿನ ಕಲಾವಿದ ಯಲ್ಲಪ್ಪ ಭಜಂತ್ರಿ ಕಲಾ ತಂಡದಿಂದ ಶಹನಾಯಿ ವಾದನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶದ ಮೇರೆಗೆ ಅಮೀನಗಡದ ಪರಪ್ಪ ಸಿಂಹಾಸನ ಕಲಾತಂಡದಿಂದ ಕರಡಿ ಮಜಲು ಮತ್ತು ವಿವಿಧ ಬಗೆಯ ದೇಶಿಯ ಉಡುಪುಗಳ ಪ್ರದರ್ಶನ ನಡೆಯಲಿದೆ. ಕಾಲೇಜು ವಿದ್ಯಾರ್ಥಿನಿಯರು ಸಿದ್ಧಪಡಿಸಿದ ಗ್ರಾಮೀಣ ಸೊಗಡಿನ 250 ಕ್ಕಿಂತ ಅಧಿಕವಾದ ವಿವಿಧ ತರಹದ ಖಾದ್ಯಗಳ ಪ್ರದರ್ಶನವಿದ್ದು, ಸಾರ್ವಜನಿಕರಿಗೆ ಮುಕ್ತವಾಗಿ ಭೋಜನದ ಸವಿ ಸವಿಯುವ ಅವಕಾಶವಿದೆ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಪಂಡಿತಪ್ಪ ಪೂಜಾರಿ ಮಾತನಾಡಿ, ಪ್ರತಿವರ್ಷ ನಮ್ಮ ದೇಶದಲ್ಲಿ ಆಚರಿಸುವಂತ ಹಬ್ಬ ಹರಿದಿನಗಳ ಮೊದಲು ನಾವು ಮಕ್ಕಳಿಗೆ ತಿಳಿಸಬೇಕು. ಅದರ ಆಚರಣೆಯಿಂದಾಗುವ ಲಾಭಗಳು ಮತ್ತು ಹಬ್ಬಗಳನ್ನು ಆಚರಿಸುವ ಉದ್ದೇಶಗಳನ್ನು ತಿಳಿಸಬೇಕು ಎಂದು ಹೇಳಿದರು.

ಸಂಸ್ಥೆಯ ಚೇರ್ಮನ್ ಶ್ರೀಮಂತ ಒಂಟಗೊಡಿ, ಸದಸ್ಯರಾದ ಚಿಕ್ಕಪ್ಪ ನಾಯಕ, ಸಂಗನಗೌಡ ಪಾಟೀಲ, ಪರಮಾನಂದ ಆಲಗೂರ, ಮುತ್ತಪ್ಪ ಹೊಸಪೇಟೆ, ಪ್ರಾಚಾರ್ಯ ಪಿ. ಎಚ್. ನಾಯಕ, ದೈಹಿಕ ಶಿಕ್ಷಕ ರಾಘವೇಂದ್ರ ನಾಯಕ, ಪತ್ರಕರ್ತರಾದ ಮಹಾದೇವ ಕುಲಗೋಡ, ರಾಘವೇಂದ್ರ ನೀಲನ್ನವರ ಇತರರಿದ್ದರು.