ಹನೂರಿನ ಜಿ.ವಿ ಗೌಡ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಿನೊಸಿಸ್ ಸಂಸ್ಥೆ ವತಿಯಿಂದ ಉಚಿತವಾಗಿ ನೋಟ್‌ಬುಕ್ ವಿತರಿಸಲಾಯಿತು. ವಿನೋದ್, ಮಹೇಶ್, ಕಿರಣ್‌ಕುಮಾರ್, ಶಾಂತರಾಜು, ಶ್ರೀನಿವಾಸನಾಯ್ಡು ಇತರರು ಇದ್ದರು.  
ಜಿಲ್ಲೆ

ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನಹರಿಸಲಿ

ಅಭಿನಯ್ ಎಚ್.ಎಂ

ಹನೂರು: ಶೈಕ್ಷಣಿಕ ವಲಯದ ಎಲ್ಲ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸಿನೊಸಿಸ್ ಸಂಸ್ಥೆ ಉಚಿತವಾಗಿ ನೋಟ್‌ಬುಕ್ ವಿತರಿಸುತ್ತಿರುವುದು ಮಕ್ಕಳ ಕಲಿಕೆಗೆ ಸ್ಫೂರ್ತಿದಾಯಕವಾಗಿದೆ ಎಂದು ಬಿಇಒ ಮಹೇಶ್ ಅಭಿಪ್ರಾಯಪಟ್ಟರು.

ಸಿನೊಸಿಸ್ ಸಂಸ್ಥೆ ವತಿಯಿಂದ ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಬಡ ವರ್ಗದ ಮಕ್ಕಳೇ ಹೆಚ್ಚು ಶಿಕ್ಷಣ ಪಡೆಯುತ್ತಿದ್ದು, ಸರ್ಕಾರ ಉಚಿತವಾಗಿ ಪಠ್ಯಪುಸ್ತಕವನ್ನು ವಿತರಿಸುತ್ತಿದೆ. ಆದರೆ ನೋಟ್‌ಬುಕ್‌ಗಳನ್ನು ಖರೀದಿಸಬೇಕಿತ್ತು. ಇದರಿಂದ ಆರ್ಥಿಕವಾಗಿ ಹಿಂದುಳಿದ ಪಾಲಕರು ಕಷ್ಟಪಡುವಂತಾಗಿತ್ತು. ಇದನ್ನು ಮನಗಂಡು ಸಂಸ್ಥೆ ಅನುಕೂಲ ಕಲ್ಪಿಸುವ ಸಲುವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.

ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಇನ್ನಷ್ಟು ಹೆಚ್ಚಾದಾಗ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಲಿದೆ. ಹಾಗೆಯೇ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.

ಬಳಿಕ ಸಂಸ್ಥೆಯ ಮುಖ್ಯಸ್ಥ ವಿನೋದ್ ಅವರು ರಾಷ್ಟ್ರೀಯ ಹಬ್ಬಗಳು ಹಾಗೂ ಮಹಾನ್ ನಾಯಕರ ಜಯಂತಿ ಆಚರಣೆ ಸಂಬಂಧ ಪ್ರಶ್ನಿಸಿ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಿದರು.

ನಿವೃತ್ತ ಎಎಸೈ ಪ್ರಕಾಶ್, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಚಿನ್ನಪ್ಪಯ್ಯ, ಮಹೇಶ್, ಸಿಆರ್‌ಪಿ ರಮೇಶ್, ಮುಖ್ಯ ಶಿಕ್ಷಕ ಮಹಾದೇವ, ಶಿಕ್ಷಕರಾದ ಶಾಂತರಾಜು, ಶ್ರೀನಿವಾಸನಾಯ್ಡು, ಅರುಣ್, ಶಿವಸ್ವಾಮಿ ಇತರರು ಇದ್ದರು.