ಜಿಲ್ಲೆ

ಕಾವೇರಿ ವಿಚಾರಕ್ಕೆ ಕೇಂದ್ರ ಮಧ್ಯಸ್ಥಿಕೆ ವಹಿಸಲಿ

ಆರ್.ಕೃಷ್ಣ

ಮೈಸೂರು: ರಾಜ್ಯ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಕೈ ಚೆಲ್ಲಿದೆ. ಆದ್ದರಿಂದ ಈ ಕೂಡಲೇ ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕು ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಒತ್ತಾಯಿಸಿದರು.
ಕಾವೇರಿ ಕ್ರಿಯಾ ಸಮಿತಿಯಿಂದ ನಗರದ ಪುರಭವನದ ಬಳಿ ನಡೆಯುತ್ತಿರುವ ಕಾವೇರಿ ನೀರಿಗಾಗಿ ವಾರದ ಧರಣಿ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಅವರು ಶನಿವಾರ ಮಾತನಾಡಿದರು.
ಪರಿಸ್ಥಿತಿಯನ್ನು ಗಮನಿಸಿದರೆ ಕಾವೇರಿ ವಿಷಯವನ್ನು ರಾಜ್ಯ ಸರ್ಕಾರ ಕೈ ಚೆಲ್ಲಿದಂತೆ ಕಾಣುತ್ತಿದೆ. ಹಾಗಾಗಿ ಪ್ರಧಾನಮಂತ್ರಿಗಳು ಮಧ್ಯೆ ಪ್ರವೇಶಿಸಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮೊದಲು ರಾಜ್ಯಕ್ಕೆ ಕುಡಿಯುವ ನೀರು, ರೈತರಿಗೆ ಬೆಳೆ ಬೆಳೆಯಲು ಬಿಡಬೇಕು. ತದನಂತರ ತಮಿಳುನಾಡಿಗೆ ನೀರು ಬಿಡಲು ಒಂದು ಸಂಕಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕು ಎಂದರು.
ಈಗಿನ ರಾಜಕಾರಣಿಗಳು ನಾಡಪ್ರಭು ಕೆಂಪೇಗೌಡರ ರೀತಿ ದೂರ ದೃಷ್ಟಿಯನ್ನು ಹೊಂದಿ, ನೆಲ ಜಲಗಳ ಬಗ್ಗೆ ಆಸಕ್ತಿಯನ್ನು ವಹಿಸಬೇಕು. ರಾಜ್ಯದ ಎಲ್ಲ ನೀರಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜೈಪ್ರಕಾಶ್ ಮಾತನಾಡಿ, ಇಷ್ಟು ದಿನಗಳಾದ ಮೇಲೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇಕೆದಾಟಿನ ನೆನಪಾಯಿತಲ್ಲ. ತಮಿಳುನಾಡು ಮೇಕೆದಾಟು ವಿಚಾರದಲ್ಲಿ ಯಾವುದೇ ತಕರಾರಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡುವ ಮೂಲಕ ನಮ್ಮ ಕಾವೇರಿ ಹೋರಾಟಗಾರರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವ ಹಾಗೆ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆದು ಈ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು. ಕಾವೇರಿ ನೀರಿನ ವಿಚಾರವಾಗಿ ನಮ್ಮ ರಾಜ್ಯಕ್ಕೆ ಪ್ರಧಾನಿಗಳಿಂದ ಶಾಶ್ವತ ಪರಿಹಾರ ಸಿಗುವ ಹಾಗೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ ಈ ಕೂಡಲೇ ಕಾವೇರಿ ಕೊಳ್ಳದ ರೈತರಿಗೆ ಕೆರೆ-ನಾಲೆಗಳಿಗೆ ಈ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ .ಕೆ ರಾಮು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ. ಎಂ. ಬಿ. ಮುಂಜೇಗೌಡ, ಕಾವೇರಿ ಕ್ರಿಯಾಸಮಿತಿ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷರಾದ ಎಂ ಜೆ ಸುರೇಶ ಗೌಡ, ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಸಿಂಧುವಳ್ಳಿ ಶಿವಕುಮಾರ್, ನಾಗರಾಜ್, ವರಕೂಡು ಕೃಷ್ಣೇಗೌಡ, ಕೃಷ್ಣಪ್ಪ, ಲಕ್ಷ್ಮೀ, ಪ್ರಭುಶಂಕರ್, ಮಹೇಶ್, ಆಟೋ ಮಹದೇವ್, ಮಂಜುಳಾ, ನೇಹಾ, ಭಾಗ್ಯಮ್ಮ, ಪ್ರಕಾಶ್, ಶಿವಲಿಂಗಯ್ಯ, ಪೈಲ್ವಾನ್ ಬಾಲಾಜಿ, ಕುಮಾರ್‌ಗೌಡ, ಹನುಮಂತಯ್ಯ, ಬಲರಾಮ್ , ರಮೇಶ್, ಪ್ರಭಾಕರ್, ರವೀಶ್, ಅಕ್ಬರ್, ಸ್ವಾಮಿಗೌಡ, ಸಂಜಯ್, ವಿಷ್ಣು, ದರ್ಶನ್‌ಗೌಡ, ಬಾಲು ಇತರರು ಇದ್ದರು.